FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Saturday, 5 September 2020

ಆನ್ಲೈನ್ ತರಗತಿಯಲ್ಲಿ ಮಿಂಚಿದ ಕುಳೂರು ಶಾಲೆಯ ಶಿಕ್ಷಕ-ಶಿಕ್ಷಕರಿಯರು

'ಗುರು ಬ್ರಹ್ಮ, ಗುರುರ್ವಿಷ್ಣು,

ಗುರು ದೇವೋ ಮಹೇಶ್ವರಃ,

ಗುರು ಸಾಕ್ಷಾತ್ ಪರಬ್ರಹ್ಮ

ತಸ್ಮೈ ಶ್ರೀ ಗುರವೇ ನಮಃ'.

             ಸಮಾಜದಲ್ಲಿ ಗುರುವಿಗೆ ಇರುವ ಸ್ಥಾನಮಾನವನ್ನು ಈ ಸಾಲು ನಮಗೆಲ್ಲರಿಗೂ ತಿಳಿಸಿ ಕೊಡುತ್ತದೆ. ಮಗುವಿಗೆ ತಾಯಿಯೇ ಮೊದಲ ಗುರುವಾದರೆ, ಆನಂತರದ ಮಗುವಿನ ಪರಿಪೂರ್ಣ ಅಭಿವೃದ್ಧಿಗೆ ಗುರು ನಾಂದಿ ಹಾಡುವನು. ಜಾತಿ, ಮತ, ಧರ್ಮಗಳ ಭೇದವಿಲ್ಲದ ದೇಗುಲವೊಂದಿದ್ದರೆ ಅದು ಶಾಲೆಯಲ್ಲದೆ ಮತ್ತೊಂದಿಲ್ಲ. ಜೊತೆಗೆ ಸಮಾಜದಲ್ಲಿ ಗುರುವಿಗೆ ಸಿಗುವ ಗೌರವಾದರಗಳು ಇನ್ಯಾವುದೇ ಹುದ್ದೆಗೆ ಸಿಗುವುದು ಬಹಳ ಅಪರೂಪವೆಂದೇ ಹೇಳಬಹುದು.

            ನಮ್ಮ ದೇಶದ ಮೊದಲ ಉಪರಾಷ್ಟ್ರಪತಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನಾಚರಣೆಯಾದ ಸಪ್ಟೆಂಬರ್ 5 ರಂದು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಾಗಿ ದೇಶದಾದ್ಯಂತ ಆಚರಿಸಲಾಗುತ್ತಿದೆ. ಆದರ್ಶ ಶಿಕ್ಷಕರಾಗಿ ಗುರುತಿಸಿಕೊಂಡಿದ್ದ ಡಾ. ಎಸ್. ರಾಧಾಕೃಷ್ಣನ್ ರವರಿಗೆ ಕೊಟ್ಟ ಗೌರವವಿದು. ಅವರ ಜೀವನಚರಿತ್ರೆ ಎಲ್ಲರಿಗೂ ಮಾದರಿಯಾಗಿರುವುದಂತು ಸತ್ಯ.

            ಸಮಾಜದಲ್ಲಿ ಗುರುವಿನ ಸ್ಥಾನದಲ್ಲಿದ್ದುಕೊಂಡು ಆದರ್ಶ ಶಿಕ್ಷಕರಾಗಿ ಗುರುತಿಸಿಕೊಂಡವರು ಅದೆಷ್ಟೋ ಮಂದಿ ಇರುವರು. ಇವರಲ್ಲಿ ಕೆಲವರನ್ನು ಸಮಾಜ ಗುರುತಿಸಿಕೊಂಡಿದ್ದರೆ, ಇನ್ನು ಅನೇಕರು ತೆರೆ ಮರೆಯಲ್ಲಿ ಆದರ್ಶ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿರುವರು. 

            ಪ್ರತಿ ವರ್ಷ ಈ ದಿನವನ್ನು ಶಾಲೆಯಲ್ಲಿ ಔಚಿತ್ಯ ಪೂರ್ಣವಾಗಿ ಆಚರಿಸಿದ್ದು, ಈ ಸಲ ಕೊರೋನ ಕಾರಣದಿಂದ ಶಾಲೆಯಲ್ಲಿ ಯಾವುದೇ ಆಚರಣೆಯನ್ನು ಸರಿಯಾಗಿ ಆಚರಿಸಲಾಗಲಿಲ್ಲ. ಕೊರೋನ ನಿಯಂತ್ರಣಕ್ಕೆ ಸರಕಾರದ ನಿಯಮಗಳನ್ನು ಪಾಲಿಸಬೇಕಾದುದು ನಮ್ಮ ಕರ್ತವ್ಯವೂ ಹೌದು.

           ಕೊರೋನ ಮಹಾಮಾರಿಯಿಂದಾಗಿ ಈ ಶೈಕ್ಷಣಿಕ ವರ್ಷದ ಶಿಕ್ಷಣವನ್ನು ಮಕ್ಕಳು ಕೇವಲ ಆನ್ಲೈನ್ ಕ್ಲಾಸುಗಳಿಂದಲೇ ಪಡೆಯುವಂತಾಗಿದೆ. ಈ ನಿಟ್ಟಿನಲ್ಲಿ ಕೇರಳ ಸರಕಾರ ಮಾಡಿದ ಆನ್ಲೈನ್ ಕ್ಲಾಸುಗಳ ವ್ಯವಸ್ಥೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ತಡೆ ಬರದಂತೆ ಕಾಪಾಡುವಲ್ಲಿ ಯಶಸ್ಸನ್ನು ಪಡೆದಿದೆ. ಇದಕ್ಕಾಗಿ ನಮ್ಮ ಹೆಮ್ಮೆಯ ಅಧ್ಯಾಪಕ ಬಂಧುಗಳ ಕೊಡುಗೆ ಅಪಾರ. ಆನ್ಲೈನ್ ಕ್ಲಾಸುಗಳನ್ನು ಮಾಡಲು ಮುಂದೆ ಬಂದ ಅಧ್ಯಾಪಕ-ಅಧ್ಯಾಪಿಕೆಯರು ಮಾಡಿದಂತಹ ತರಗತಿಗಳ ವೀಡಿಯೋ, ಅದನ್ನು ಸೂಕ್ತ ರೀತಿಯಲ್ಲಿ ಎಡಿಟಿಂಗ್ ಮಾಡಿದ ಅಧ್ಯಾಪಕರು ಎಲ್ಲವೂ ಎಲ್ಲರನ್ನೂ ಆಕರ್ಷಿಸಿದ್ದು ಮಕ್ಕಳನ್ನು ಸೆಳೆಯುವಲ್ಲಿ ಸಾಧ್ಯವಾಗಿದೆ.

          ಈ ಆನ್ಲೈನ್ ಕ್ಲಾಸುಗಳನ್ನು ತೆಗೆಯುವವರಲ್ಲಿ ನಮ್ಮ ಕುಳೂರು ಶಾಲೆಯ ಮೂವರು ಅಧ್ಯಾಪಕರು ಇರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ, ಅಧ್ಯಾಪಿಕೆಯರಾದ ಸೌಮ್ಯ ಪಿ ಹಾಗೂ ನಯನ ಎಂ ಆನ್ಲೈನ್ ಕ್ಲಾಸುಗಳನ್ನು ನಡೆಸಿಕೊಟ್ಟು ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದು, ಶಾಲೆಗೆ ಹೆಮ್ಮೆಯನ್ನು ತಂದುಕೊಟ್ಟಿದೆ. ಮಕ್ಕಳನ್ನು ಆಕರ್ಷಿಸುವ ರೀತಿಯಲ್ಲಿ ಇವರ ತರಗತಿಗಳು ಮೂಡಿ ಬಂದಿದ್ದು ಇದಕ್ಕಾಗಿ ಮಾಡಿದಂತಹ ಶ್ರಮ, ಕಾರ್ಯದಕ್ಷತೆ, ಉತ್ಸಾಹ ಹಾಗೂ ಆಸಕ್ತಿ ಎಲ್ಲವೂ ಆಕರ್ಷಣೆಗೆ ಕಾರಣವಾಗಿದೆ. ಇಂದಿನ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಇವರಿಗೆ ಪ್ರತ್ಯೇಕ ಅಭಿನಂದನೆಗಳೊಂದಿಗೆ ಹೃದಯಾಂತರಾಳದ ಧನ್ಯವಾದಗಳು ಎಲ್ಲರ ಪರವಾಗಿ ಅರ್ಪಿಸುತ್ತಿದ್ದೇನೆ.

 (ನನಗೂ ಆನ್ಲೈನ್ ಕ್ಲಾಸುಗಳ ತರಗತಿ ಮಾಡಲು ಮತ್ತು ವೀಡಿಯೋ ಎಡಿಟಿಂಗ್ ಮಾಡಲು ಅವಕಾಶ ಸಿಕ್ಕಿದ್ದು, ನನ್ನ ವೈಯಕ್ತಿಕ ಕಾರಣಗಳಿಂದ ಹೋಗಲು ಸಾಧ್ಯವಾಗದಿರುವುದು ನನ್ನ ದುರಾದೃಷ್ಟವೆಂದೇ ಹೇಳಬಹುದು. ಇಲ್ಲದಿದ್ದರೆ ಶಾಲೆಯ ಎಲ್ಲಾ ಅಧ್ಯಾಪಕರು ಈ ಆನ್ಲೈನ್ ಕ್ಲಾಸು ನಡೆಸುವ ಕಾರ್ಯಾಗಾರದಲ್ಲಿ ಭಾಗವಹಿಸುವಂತಾಗುತ್ತಿತ್ತು.)

                                                    ✍ ಜೆ. ಪಿ ಪಾಲೆಂಗ್ರಿ





No comments:

Post a Comment