ಈ ಶೈಕ್ಷಣಿಕ ವರ್ಷದಲ್ಲಿ ಕೊರೋನ ಮಹಾಮಾರಿಯಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ಆದಂತಹ ಬದಲಾವಣೆ ಮಕ್ಕಳಿಗೆಲ್ಲಾ ಒಂದು ವಿಶಿಷ್ಟ ಅನುಭವವನ್ನು ತಂದುಕೊಟ್ಟಿದೆ. ಸರಕಾರವು ಆನ್ಲೈನ್ ಕ್ಲಾಸುಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದರೂ ಮಕ್ಕಳಿಗೆ ಕೊರೋನ ಸಂದಿಗ್ಧತೆಯಲ್ಲಿ ಈ ಆನ್ಲೈನ್ ಶಿಕ್ಷಣ ಅನಿವಾರ್ಯವಾಯಿತು. ಶಾಲೆಯು ಮಕ್ಕಳಿಲ್ಲದೆ ಹತ್ತು ಹಲವು ಶಾಲಾ ಕಾರ್ಯಕ್ರಮಗಳಿಂದ ವಂಚಿತವಾಯಿತು. ಎಲ್ಲಾ ಚಟುವಟಿಕೆಗಳು ಆನ್ಲೈನ್ ಮೂಲಕ ನಡೆಯುತ್ತಿರುವ ಈ ಸಂದರ್ಭದಲ್ಲಿ ಕುಳೂರು ಶಾಲೆ ಆನ್ಲೈನ್ ಶಾಲಾ ವಾರ್ಷಿಕೋತ್ಸವ ನಡೆಸಿ ಎಲ್ಲರ ಗಮನ ಸೆಳೆಯುತ್ತಿದೆ.
ಮಂಜೇಶ್ವರದ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ವರ್ಷ ಆನ್ಲೈನ್ ಶಾಲಾ ವಾರ್ಷಿಕೋತ್ಸವವನ್ನು ಮಾಡಿ ಗಮನ ಸೆಳೆದಿರುವರು. ಪ್ರತಿ ವರ್ಷ ಶಾಲಾ ರಕ್ಷಕ-ಶಿಕ್ಷಕ ಸಂಘ, ಹಳೆ ವಿದ್ಯಾರ್ಥಿ ಸಂಘ ಹಾಗೂ ಊರವರ ಸಹಕಾರದಿಂದ ನಡೆಯುತ್ತಿದ್ದ ಶಾಲಾ ವಾರ್ಷಿಕೋತ್ಸವವು ಈ ವರ್ಷವೂ ಸರಕಾರದ ಕೋವಿಡ್ ನಿಯಂತ್ರಣಾ ಮಾನದಂಡಗಳನ್ನು ಪಾಲಿಸಿಕೊಂಡು ನಡೆದಿರುವುದು ವಿಶೇಷವಾಗಿದೆ. ಪ್ರಪ್ರಥಮವಾಗಿ ನಡೆದ ಈ ಆನ್ಲೈನ್ ಶಾಲಾ ವಾರ್ಷಿಕೋತ್ಸವವನ್ನು ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ವಹಿಸಿಕೊಂಡು ಶುಭ ಕೋರಿದರು. ಉಳಿದಂತೆ ಮಂಜೇಶ್ವರ ಬ್ಲೋಕ್ ಪಂಚಾಯತು ಸದಸ್ಯೆ ಅಶ್ವಿನಿ ಎಂ. ಎಲ್, ಮೀಂಜ ಗ್ರಾಮ ಪಂಚಾಯಿತಿನ ವಿದ್ಯಾಭ್ಯಾಸ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಸರಸ್ವತಿ ಕೆ, ಕುಳೂರು ವಾರ್ಡ್ ಸದಸ್ಯ ಜನಾರ್ಧನ ಪೂಜಾರಿ, ಮಂಜೇಶ್ವರ ಉಪ ಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ, ಮಂಜೇಶ್ವರ ಬಿ. ಆರ್. ಸಿ ಯ ಬ್ಲಾಕ್ ಪ್ರೋಗ್ರಾಂ ಕೋರ್ಡಿನೇಟರ್ ಆದರ್ಶ್, ಕುಳೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹಮ್ಮದ್ ಕಂಚಿಲ, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ, ಮಾತೃ ಸಂಘದ ಅಧ್ಯಕ್ಷೆ ರಾಜಲಕ್ಷ್ಮಿ ದೇರಂಬಳ ಗುತ್ತು, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸತೀಶ್ ಎಲಿಯಾಣ ಕಾರ್ಯಕ್ರಮಕ್ಕೆ ಶುಭ ಕೋರಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಶಾಲಾ ಶಿಕ್ಷಕಿ ಸೌಮ್ಯ ಪಿ ವಂದಿಸಿದರು. ಬಳಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಈ ಎಲ್ಲಾ ಕಾರ್ಯಕ್ರಮಗಳು 'ನಮ್ಮ ಕುಳೂರು' ಎಂಬ ಯೂಟ್ಯೂಬ್ ಚಾನಲಿನಲ್ಲಿ ಪ್ರಸಾರವಾಗಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
No comments:
Post a Comment