ಹತ್ತು ಸಂವತ್ಸರಗಳನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿ ಶತಮಾನೋತ್ಸವದ ಅಂಚಿಗೆ ಬಂದಿರುವ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಈ ವರ್ಷ ಶತಮಾನೋತ್ಸವವನ್ನು ಆಚರಿಸುತ್ತಿದೆ. ಸಮಾಜಕ್ಕೆ ಸಾವಿರಾರು ವಿದ್ಯಾವಂತರನ್ನು ನೀಡಿ, ದೇಶ ವಿದೇಶಗಳಲ್ಲಿ ಗುರುತಿಸಿಕೊಂಡ ಹಲವಾರು ಮಹನೀಯರ ಪ್ರಾಥಮಿಕ ವಿದ್ಯಾಭ್ಯಾಸವು ಕುಳೂರು ಶಾಲೆಯಲ್ಲಿ ಆಗಿರುವುದು ಎಂಬುದು ಈ ಶಾಲೆಯ ಹೆಗ್ಗಳಿಕೆ. ಇಂತಹ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಈಗ ಶಾಲೆಯು ಅಭಿವೃದ್ಧಿ ಪಥದತ್ತ ಸಾಗುತ್ತಿದೆ.
ಶಾಲೆಯು ಶತಮಾನೋತ್ಸವದ ಸಂಭ್ರಮದಲ್ಲಿದ್ದು ಇದನ್ನು ಇನ್ನಷ್ಟು ಸ್ಮರಣೀಯವನ್ನಾಗಿಸಲು ಹಲವಾರು ಕೊಡುಗೈ ದಾನಿಗಳು ಮುಂದೆ ಬಂದಿರುವುದು ಶಾಲೆಯೊಂದಿಗಿರುವ ಅಭಿಮಾನ, ಪ್ರೀತಿಯನ್ನು ತೋರಿಸುತ್ತದೆ. ಇದರಲ್ಲಿ ಪ್ರಮುಖ ಕೊಡುಗೆಯಾದ ಭವ್ಯ ರಂಗ ಮಂದಿರದ ಕೊಡುಗೆಯನ್ನು ಶಾಲಾ ಹಳೆ ವಿದ್ಯಾರ್ಥಿಯೂ, ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರೂ, ಮುಂಬೈನ ಹೇರಂಬ ಇಂಡಸ್ಟ್ರಿಸ್ ಸ್ಥಾಪಕಾಧ್ಯಕ್ಷರೂ ಆಗಿರುವ ಶ್ರೀ ಸದಾಶಿವ ಕೆ ಶೆಟ್ಟಿ ಕುಳೂರು ಕನ್ಯಾನರವರು ನೀಡುತ್ತಿದ್ದು ಇದರ ಕಾಮಗಾರಿಗೆ ಇಂದು ಶಾಲೆಯಲ್ಲಿ ಚಾಲನೆ ನೀಡಲಾಯಿತು. ಚಾಲನೆಯನ್ನು ನೀಡಿ ಮಾತನಾಡಿದ ಶ್ರೀ ಸದಾಶಿವ ಕೆ ಶೆಟ್ಟಿ ರವರು 'ಎಲ್ಲರ ಜೀವನದಲ್ಲೂ ಪ್ರಾಥಮಿಕ ಶಿಕ್ಷಣವು ಅಡಿಪಾಯ ಇದ್ದಂತೆ, ಅದು ಗಟ್ಟಿಯಾದರೆ ಮಾತ್ರ ಜೀವನದಲ್ಲಿ ಮೇಲೇರಲು, ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ' ಎಂದರು. ಹೇರಂಬ ಇಂಡಸ್ಟ್ರೀಸ್ ಮುಂಬೈ ಇದರ ಆಡಳಿತ ನಿರ್ದೇಶಕರಾದ ಶ್ರೀ ರಘುರಾಮ ಕೆ ಶೆಟ್ಟಿ ಕುಳೂರು ಕನ್ಯಾನ ರವರು ಮಾತನಾಡುತ್ತಾ 'ಸ್ಪರ್ಧಾತ್ಮಕ ಯುಗದಲ್ಲಿ ಶಾಲೆಗಳೂ ಎಲ್ಲರನ್ನೂ ಆಕರ್ಷಿಸುವಂತಿರಬೇಕು. ಆಗ ಮಾತ್ರ ಶಾಲೆ ಅಭಿವೃದ್ಧಿ ಆಗಲು ಸಾಧ್ಯ' ಎಂದರು. ಕಾರ್ಯಕ್ರಮದಲ್ಲಿ ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿ ಕುಳೂರು, ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಹಾಜಿ ಕಂಚಿಲ, ಶತಮಾನೋತ್ಸವ ಸಮಿತಿಯ ಶ್ರೀ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಶ್ರೀ ದಿವಾಕರ ಶೆಟ್ಟಿ ಕುಳೂರು ಕನ್ಯಾನ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಸೌಮ್ಯ ಪಿ ವಂದಿಸಿದರು. ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಜಯರಾಜ್ ಶೆಟ್ಟಿ ಚಾರ್ಲ ಕಾರ್ಯಕ್ರಮವನ್ನು ಸಂಘಟಿಸಿದರು.ಶತಮಾನೋತ್ಸವ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.
No comments:
Post a Comment