ತುಳುನಾಡಿನಲ್ಲಿ ಆಟಿ ತಿಂಗಳಿಗೆ ವಿಶೇಷ ಪ್ರಾಶಸ್ತ್ಯವಿದೆ. ನಮ್ಮ ಪೂರ್ವಿಕರು ಮಳೆಗಾಲದ ಈ ಕಷ್ಟದ ಸಮಯವನ್ನು ಕಳೆಯಲು, ರೋಗ ರುಜಿನಾದಿಗಳಿಂದ ಪಾರಾಗಲು ತಮ್ಮ ಆಹಾರ ಪದ್ಧತಿ, ಜೀವನ ಶೈಲಿಯನ್ನು ವಿಶೇಷವಾಗಿ ಕೊಂಡೊಯ್ಯುವ ತುಳುನಾಡಿನ ಸಂಸ್ಕೃತಿಯು ಎಲ್ಲರನ್ನೂ ಆಕರ್ಷಿಸುತ್ತದೆ. ಆದರೆ ಕಾಲ ಬದಲಾದಂತೆ ಹಿಂದಿನ ಜೀವನ ಶೈಲಿ, ಆಹಾರ ಕ್ರಮಗಳೂ ಬದಲಾದವು. ಅವುಗಳನ್ನು ಈಗಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿಡೊಂಜಿ ದಿನ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಎಲಿಯಾಣ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿ ಕುಳೂರು ರವರು ತುಳುನಾಡಿನ ಸಂಸ್ಕೃತಿ, ಆಟಿ ತಿಂಗಳ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಹಾಜಿ ಕಂಚಿಲ, ಪ್ರಧಾನ ಕಾರ್ಯದರ್ಶಿ ಶ್ರೀ ಜಯರಾಜ್ ಶೆಟ್ಟಿ ಚಾರ್ಲ, ಪ್ರೊಗ್ರಾಮ್ ಕಮಿಟಿಯ ಅಧ್ಯಕ್ಷರಾದ ಶ್ರೀ ಹರಿರಾಮ ಕುಳೂರು, ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಚಂದ್ರಾವತಿ ವಿ. ಪಿ ಕುಳೂರು, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಚೈತ್ರಾ ಕಲ್ಕಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಹಳೆ ವಿದ್ಯಾರ್ಥಿ, ದೈವ ನರ್ತಕರೂ ಆಗಿರುವ ಶ್ರೀ ಲೋಕೇಶ್ ರವರು ಆಟಿ ತಿಂಗಳಲ್ಲಿ ಮನೆ ಮನೆಗಳಿಗೆ ಬರುವ ಆಟಿ ಕಳಂಜನ ಕುರಿತಾದ ಹಾಡು ಹಾಗೂ ಅದರ ಐತಿಹ್ಯದ ಕುರಿತಾಗಿ ಮಾಹಿತಿ ನೀಡುವುದರೊಂದಿಗೆ ತಮ್ಮ ತಂಡದೊಂದಿಗೆ ಬಂದು ಆಟಿ ಕಳಂಜ ನರ್ತನವನ್ನೂ ಪ್ರದರ್ಶಿಸಿ ಕಾರ್ಯಕ್ರಮಕ್ಕೆ ಹೊಸ ಕಲೆಯನ್ನು ತಂದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಸೌಮ್ಯ ಪಿ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಶ್ವೇತ ಇ ವಂದಿಸಿದರು. ಶಾಲಾ ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ತುಳುನಾಡಿನ ಆಟಿ ತಿಂಗಳ ವಿಶೇಷ ತಿಂಡಿ ತಿನಿಸುಗಳನ್ನು ಒಳಗೊಂಡ ಆಟಿ ತಿಂಗಳ ವಿಶೇಷ ಊಟವನ್ನು ಸವಿಯಲಾಯಿತು. ನಂತರ ಶಾಲಾ ಮಕ್ಕಳಿಗೆ ಹಾಗೂ ಹೆತ್ತವರಿಗೆ ಗ್ರಾಮೀಣ ಆಟಗಳನ್ನು ಆಡಿಸುವ ಮೂಲಕ ಗ್ರಾಮೀಣ ಆಟಗಳ ಪ್ರದರ್ಶನ ನಡೆಸಲಾಯಿತು. ಜೊತೆಗೆ ಜನಪದ ಗೀತೆಗಳ ಗಾಯನವು ಕಾರ್ಯಕ್ರಮಕ್ಕೆ ಮತ್ತಷ್ಟು ರಂಗನ್ನು ತಂದಿತು.
ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.
No comments:
Post a Comment