ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿದ ಜೈವಿಕ ತರಕಾರಿ ಕೃಷಿ ತೋಟ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಮಕ್ಕಳಲ್ಲಿ ಎಳವೆಯಲ್ಲೇ ಕೃಷಿಯಲ್ಲಿ ಆಸಕ್ತಿಯನ್ನು ಬೆಳೆಸಲು, ಸ್ವಾವಲಂಬಿ ಜೀವನದ ಅರಿವನ್ನು ಮೂಡಿಸುವ ಉದ್ದೇಶದಿಂದ ನಿರ್ಮಿಸಿದ ಜೈವಿಕ ತರಕಾರಿ ಕೃಷಿ ತೋಟ ಇದೀಗ ಎಲ್ಲರಿಗೂ ಮಾದರಿಯೆನಿಸಿದೆ. ಮೀಂಜ ಕೃಷಿ ಇಲಾಖೆಯ ಸಹಕಾರದೊಂದಿಗೆ ಶಾಲಾ ಪಿ. ಟಿ. ಎ ಅಧ್ಯಕ್ಷರ ಮುತುವರ್ಜಿಯಿಂದ ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಪಿ. ಟಿ. ಎ ಹಾಗೂ ಶಾಲಾ ಹಳೆ ವಿದ್ಯಾರ್ಥಿಗಳ ಸಂಪೂರ್ಣ ಸಹಕಾರದಿಂದ ನಿರ್ಮಾಣಗೊಂಡ ತೊಂಡೆ ಕೃಷಿ ತೋಟವು ಶಾಲೆಗೊಂದು ಆದಾಯ ಮೂಲವಾಗಿ ಪರಿಣಮಿಸಿದೆ. ಶಾಲಾ ಮಕ್ಕಳ ಮಧ್ಯಾಹ್ನದೂಟಕ್ಕೆ ಸಾಕಷ್ಟು ಬಳಸಿ ಉಳಿದ ತೊಂಡೆ ಕಾಯಿಯನ್ನು ಮಾರಾಟ ಮಾಡಲಾಗಿದ್ದು ಈಗಾಗಲೇ ಸುಮಾರು 8 ಕ್ವಿಂಟಾಲ್ ನಷ್ಟು ಮಾರಾಟ ಮಾಡಲಾಗಿದೆ. ಮಾರಾಟದಿಂದ ದೊರಕಿದ ಮೊತ್ತವನ್ನು ಶಾಲಾಭಿವೃದ್ಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. "ಕೇವಲ ಒಂದು ಕೃಷಿ ತೋಟದಿಂದ ಮಕ್ಕಳಿಗೆ ಕೃಷಿಯ ಕಡೆಗೆ ಒಲವನ್ನು ಮೂಡಿಸುವುದರ ಜೊತೆಗೆ ಆದಾಯ ಮೂಲವಾಗಿ ಪರಿಣಮಿಸಿದ್ದು ಶಾಲೆಗೊಂದು ವರದಾನವಾಗಿದೆ, ಎಲ್ಲರ ಸಹಕಾರ ಇದ್ದರೆ ಯಾವುದೇ ಕೆಲಸವನ್ನು ಯಶಸ್ವಿಯಾಗಿ ಮುನ್ನಡೆಸಬಹುದು ಎಂಬುದಕ್ಕೆ ಇದೊಂದು ಸಾಕ್ಷಿ" ಎಂದು ಶಾಲಾ ಮುಖ್ಯೋಪಾಧ್ಯಾಯರು ಹೆಮ್ಮೆಯಿಂದ ಹೇಳುವರು.
No comments:
Post a Comment