FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Thursday, 18 July 2019

ನಲ್ಮೆಯ ಟೀಚರಿಗೆ ಪ್ರೀತಿಯ ವಿದಾಯ

         ಕುಳೂರು ಶಾಲೆಯು ಮಾದರಿ ಶಾಲೆಯಾಗಿ ರೂಪುಗೊಳ್ಳಲು ಹಲವಾರು ಕಾರಣಗಳಿವೆ. ಹಿಂದೆಂದೂ ಕಾಣದಂತಹ ಹಳೆ ವಿದ್ಯಾರ್ಥಿಗಳ ಪ್ರೋತ್ಸಾಹ, ಊರ ವಿದ್ಯಾಭಿಮಾನಿಗಳ ಸಹಕಾರ, ಶಾಲಾ ರಕ್ಷಕ-ಶಿಕ್ಷಕ ಸಂಘದ ಬೆಂಬಲ, ಶಾಲಾ ಅಧ್ಯಾಪಕ ವೃಂದದ ನಿಸ್ವಾರ್ಥ ಸೇವಾ ಮನೋಭಾವ ಹೀಗೆ ಹತ್ತು ಹಲವು ಕಾರಣಗಳಿಂದ ಶಾಲೆಯು ದಿನದಿಂದ ದಿನಕ್ಕೆ ಪ್ರಗತಿಯತ್ತ ಸಾಗುತ್ತಿದೆ. ಸಮಾಜದ ಕೇಂದ್ರ ಬಿಂದುವಾಗಿರುವ ನಮ್ಮ ಕುಳೂರು ಶಾಲೆಯಲ್ಲಿ ಖಾಯಂ ಅಧ್ಯಾಪಕರ ಜೊತೆಗೆ ತಾತ್ಕಾಲಿಕವಾಗಿ ನಿಯೋಜಿಸಲಾದ ಅಧ್ಯಾಪಕ ವೃಂದವೂ ಶಾಲಾಭಿವೃದ್ಧಿಗೆ ಅವಿರತ ಶ್ರಮ ವಹಿಸುತ್ತಿದ್ದು ಶಾಲೆಗೆ ನೀಡುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಪಠ್ಯ ಚಟುವಟಿಕೆಗಳ ಜೊತೆಗೆ ಪಾಠ್ಯೆತರ ಚಟುವಟಿಕೆಗಳಲ್ಲೂ ಎಲ್ಲರೂ ಸಮಾನ ಮನಸ್ಕರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದೇ ಕುಳೂರು ಶಾಲೆಗೆ ಹೆಮ್ಮೆ. ಈ ಸಾಲಿಗೆ ಸೇರಿಕೊಂಡವರಲ್ಲಿ ಪ್ರೀ ಪ್ರೈಮರಿ ವಿಭಾಗದ ಅಧ್ಯಾಪಿಕೆ ರಮೀಝ ಟೀಚರ್ ಕೂಡಾ ಒಬ್ಬರು.
       ಕುಳೂರು ಶಾಲೆಯಲ್ಲಿ ಪ್ರೀ ಪ್ರೈಮರಿ ಆರಂಭವಾದಂದಿನಿಂದ ನಮ್ಮ ಶಾಲೆಯ ಮುದ್ದು ಕಂದಮ್ಮಗಳ ಪ್ರೀತಿಯ ಟೀಚರ್ ಆಗಿ ಕಾರ್ಯ ನಿರ್ವಹಿಸಿದ ರಮೀಝ ಟೀಚರ್ ಈ ವರ್ಷ ಅಧ್ಯಾಪಕ ತರಬೇತಿಯನ್ನು ಪಡೆಯಲು ಟಿ. ಟಿ. ಸಿ ಯಲ್ಲಿ ಸೀಟು ಸಿಕ್ಕಿದ್ದು ತಮ್ಮ ಅಧ್ಯಾಪನ ವೃತ್ತಿ ಜೀವನಕ್ಕಾಗಿ ತರಬೇತಿಯನ್ನು ಪಡೆಯಲು ಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ ಶಾಲೆಯಲ್ಲಿ ತಮ್ಮ ತಾತ್ಕಾಲಿಕ ಸೇವೆಯನ್ನು ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. ತಮ್ಮ ಪ್ರೀತಿಯ ಮುದ್ದು ಕಂದಮ್ಮಗಳನ್ನು ಬಿಟ್ಟು ಹೋಗುವ ಕ್ಷಣದಲ್ಲಿ, ಭಾರವಾದ ಹೃದಯದಿಂದ ಬೀಳ್ಕೊಡುವ ಅನಿವಾರ್ಯತೆ. ಈ ಸಂದರ್ಭದಲ್ಲಿ ಮಕ್ಕಳಿಗೆಲ್ಲಾ ಶುಭವನ್ನು ಕೋರಿ, ಐಸ್ ಕ್ರೀಮ್ ನೀಡಿ ಸಹಕರಿಸಿದ ಎಲ್ಲರನ್ನೂ ಸ್ಮರಿಸಿ ಒಲ್ಲದ ಮನಸ್ಸಿನಿಂದ ಶಾಲೆಗೆ ವಿದಾಯವನ್ನು ಹೇಳಿದರು. ಈ ಸಂದರ್ಭದಲ್ಲಿ ಸಹೋದ್ಯೋಗಿಗಳು, ಶಾಲಾ ವಿದ್ಯಾರ್ಥಿಗಳು ರಮೀಝ ಟೀಚರಿಗೆ ಶುಭ ಹಾರೈಸಿ, ಬೀಳ್ಕೊಟ್ಟಾಗ ಕಣ್ಣಂಚಿನಲ್ಲಿ ನೀರು ತುಂಬಿದ್ದು ಎಲ್ಲರಲ್ಲೂ ಬೇಸರದ ಛಾಯೆಯನ್ನು ಮೂಡಿಸಿತ್ತು. ಏನೇ ಆದರೂ ನಮ್ಮ ಕುಳೂರು ಶಾಲೆಯಲ್ಲಿ ಇದ್ದಷ್ಟು ದಿವಸ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ ರಮೀಝ ಟೀಚರಿಗೆ ಶುಭವಾಗಲಿ, ಮಂದಿನ ದಿನಗಳಲ್ಲಿ ನಮ್ಮ ಶಾಲೆಯಲ್ಲೇ ಅಧ್ಯಾಪನ ಸೇವೆಯನ್ನು ಸಲ್ಲಿಸುವಂತಹ ಅವಕಾಶ ಬರಲಿ ಎಂದು ಮನದಾಳದ ಹಾರೈಕೆ.




No comments:

Post a Comment