ಕಳೆದ ಒಂದೂವರೆ ವರ್ಷದ ನಂತರ ಕೇರಳದಲ್ಲಿ ಶಾಲೆಯು ಮತ್ತೆ ತೆರೆದಿದೆ. ಈ ದಿನಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಮಕ್ಕಳಿಗಂತೂ ಸಂಭ್ರಮವೋ ಸಂಭ್ರಮ. ಹಾಗಾಗಿ ನಮ್ಮ ಕುಳೂರು ಶಾಲೆಗೆ ಆಗಮಿಸುತ್ತಿರುವ ಮಕ್ಕಳನ್ನು ಇಂದು ಬಹಳ ವಿಶೇಷವಾಗಿ ಸ್ವಾಗತಿಸಲಾಯಿತು.
ಮನೆಯಲ್ಲೇ ಕುಳಿತು ಆನ್ಲೈನ್ ಕ್ಲಾಸ್ ಮೂಲಕ ಕಲಿಯುತ್ತಿದ್ದ ಮುಖದಲ್ಲಿಂದು ಹೊಸ ಹುರುಪು. ತಮ್ಮ ಸಹಪಾಠಿ ಸ್ನೇಹಿತರೊಂದಿಗೆ ಕಳೆಯುವ ಶಾಲಾ ದಿನಗಳಿಗಾಗಿ ಇಂದಿನ ದಿನದ ವರೆಗೆ ಕಾಯುವ ಸ್ಥಿತಿಯು ಮಕ್ಕಳದ್ದಾಗಿತ್ತು. ಇಂದಿನ ದಿನವಂತೂ ಮಕ್ಕಳಿಗೆ ಮರೆಯಲಾಗದ ದಿನವಾಗಿ ಪರಿಣಮಿಸಿತು. ತಮ್ಮ ಸಹಪಾಠಿಗಳು, ತರಗತಿ ಅಧ್ಯಾಪಕರು, ತರಗತಿ ಕೋಣೆ, ಕ್ಲಾಸು ಚಟುವಟಿಕೆಗಳು, ಆಟ-ಪಾಠ, ಮಧ್ಯಾಹ್ನದೂಟ ಇವೇ ಮೊದಲಾದವುಗಳನ್ನು ಮತ್ತೆ ಅನುಭವಿಸುವ ದಿನ. ಈ ಸಂಭ್ರಮವನ್ನು ಇನ್ನಷ್ಟು ಅನುಭವಿಸಲು ಮಕ್ಕಳನ್ನು ಕೈ ಚಪ್ಪಾಳೆ ಹಾಗೂ ಪುಷ್ಪ ಸಿಂಚನ ಮಾಡುವ ಮೂಲಕ ವಿಶೇಷವಾಗಿ ಸ್ವಾಗತಿಸಲಾಯಿತು.
ಕೋವಿಡ್-19 ಹಿನ್ನೆಲೆಯಲ್ಲಿ ಬಹಳ ಸರಳ ರೀತಿಯಲ್ಲಿ ನಡೆದ ಈ ಸ್ವಾಗತ ಕಾರ್ಯಕ್ರಮದಲ್ಲಿ ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿ, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಎಲಿಯಾಣ, ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಪ್ರಫುಲ್ಲ ಪೊಯ್ಯೆಲ್ ಉಪಸ್ಥಿತರಿದ್ದು ಮಕ್ಕಳಿಗೆ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ, ಶಾಲಾ ಶಿಕ್ಷಕ ವೃಂದ ಕಾರ್ಯಕ್ರಮ ನಡೆಸಿಕೊಟ್ಟರು. ಮಧ್ಯಾಹ್ನ ಮಕ್ಕಳಿಗೆ ಊಟದೊಂದಿಗೆ ಪಾಯಸವನ್ನು ನೀಡಲಾಯಿತು.
No comments:
Post a Comment