FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Tuesday 30 July 2019

ಇಂಗ್ಲೀಷ್ ಬಾಲಸಭೆ

       ತಾ. 30-07-2019 ನೇ ಮಂಗಳವಾರದಂದು ತಿಂಗಳ ಬಾಲಸಭೆಯಲ್ಲಿ ಇಂಗ್ಲೀಷ್ ಬಾಲಸಭೆಯು ನಡೆಯಿತು. ಮಕ್ಕಳಿಂದ ವಿವಿಧ ಪ್ರತಿಭಾ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದರು.














ಮೇಳೈಸಿದ ಆಟಿದ ಕೂಟ

          ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತುಳುನಾಡಿನ ಪರಂಪರೆಯನ್ನು ನೆನಪಿಸುವಂತಹ ವಿಶಿಷ್ಟ ಕಾರ್ಯಕ್ರಮ ಆಟಿದ ಕೂಟ ನಡೆಯಿತು.
          ತುಳುನಾಡಿನ ಸಂಸ್ಕೃತಿಯನ್ನು, ಪರಂಪರೆಯನ್ನು ಪ್ರತಿಬಿಂಬಿಸುವ ಆಟಿದ ಕೂಟ ಕಾರ್ಯಕ್ರಮದಲ್ಲಿ ಹಿಂದಿನ ತಲೆಮಾರಿನವರು ಆಟಿ ತಿಂಗಳಲ್ಲಿ ಅನುಭವಿಸುತ್ತಿದ್ದ ಕಷ್ಟಗಳು, ಆಹಾರದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸುತ್ತಮುತ್ತಲ ಪರಿಸರದಲ್ಲಿ ಸಿಗುವಂತಹ ಸೊಪ್ಪು ತರಕಾರಿಗಳು, ಗಡ್ಡೆ ಗೆಣಸುಗಳು, ಕಾಯಿಪಲ್ಲೆಗಳನ್ನು ಉಪಯೋಗಿಸಿ ತಯಾರಿಸುತ್ತಿದ್ದ ತಿಂಡಿ ತಿನಿಸುಗಳ ಕುರಿತು ಅರಿವನ್ನು ಮಕ್ಕಳಲ್ಲಿ ಮೂಡಿಸುವ ಉದ್ದೇಶದಿಂದ ನಡೆಸಿದ ಆಟಿದ ಕೂಟ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ತುಳುನಾಡಿನಲ್ಲಿ ಸಾಮಾನ್ಯವಾಗಿ ಆಟಿ ತಿಂಗಳಲ್ಲಿ ತಯಾರಿಸುವ ಪತ್ರೊಡೆ, ಹಲಸಿನ ಹಣ್ಣಿನ ಗಟ್ಟಿ, ಒಂದೆಲಗ ಚಟ್ನಿ, ಪೂಂಬೆ ಚಟ್ನಿ, ತಗತೆ ಪಲ್ಯ, ಮೆಂತೆ ಮಣ್ಣಿ, ಉಪ್ಪಿನಲ್ಲಿ ಹಾಕಿದ ಹಲಸಿನ ಹಣ್ಣಿನ ಪಲ್ಯ (ಉಪ್ಪಡ್ ಪಚ್ಚಿಲ್), ನುಗ್ಗೆಸೊಪ್ಪು ಪಲ್ಯ, ಬಾಳೆ ದಿಂಡು ಹಾಗೂ ಪಚ್ಚೆ ಹೆಸರು ಗಸಿ, ರಾಗಿ ಮಣ್ಣಿ, ಹುರುಳಿ ಚಟ್ನಿ, ಅರಶಿನ ಎಲೆ ಅಡೆ, ಡ್ರೈ ಪತ್ರೊಡೆ, ಮಾವಿನ ಕಾಯಿ ಚಟ್ನಿ, ದೀವಿ ಹಲಸು ಪಲ್ಯ, ಹಲಸಿನ ಹಣ್ಣಿನ ರೆಚ್ಚೆಯ ಚಟ್ನಿ, ಹಲಸಿನ ಎಲೆಯ ಮೂಡೆ, ಮೆಂತೆ ಪಚ್ಚೆ ಹೆಸರು ಗಂಜಿ, ಡ್ರೈ ಹುರುಳಿ ಚಟ್ನಿ, ಹಲಸಿನ ಹಣ್ಣಿನ ಪಾಯಸ, ಅಕ್ಕಿಯ ಉಂಡೆ, ಮಂಡಕ್ಕಿ ಉಂಡೆ, ಗೋಳಿಬಜೆ, ಪೂರಿ ಮೊದಲಾದ ಆಹಾರ ವಸ್ತುಗಳನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಹಾಗೂ ಶಾಲಾ ಶಿಕ್ಷಕ ವೃಂದ ತಯಾರಿಸಿ ತಂದು ಪ್ರದರ್ಶನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಬಳಿಕ ಸಹ ಭೋಜನವನ್ನು ಮಾಡಲಾಯಿತು.
















Friday 26 July 2019

ಕಾರ್ಗಿಲ್ ವಿಜಯ ದಿವಸ ಆಚರಣೆ

         ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು. ಆ ಪ್ರಯುಕ್ತ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಗೌರವ ನಮನವನ್ನು ಸಲ್ಲಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ಪಿ ರವರು ಮಕ್ಕಳಿಗೆ ಕಾರ್ಗಿಲ್ ಯುದ್ಧದ ಮಾಹಿತಿಯನ್ನು ನೀಡಿದರು. ಬಳಿಕ ವೀಡಿಯೋ ಪ್ರದರ್ಶನ ಏರ್ಪಡಿಸಲಾಯಿತು. ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದು ಸಹಕರಿಸಿದರು.



Wednesday 24 July 2019

ಚಾಂದ್ರದಿನ ಆಚರಣೆ

        ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾಂದ್ರದಿನವನ್ನು ಆಚರಿಸಲಾಯಿತು. ಆ ಪ್ರಯುಕ್ತ ಚಿತ್ರ ಪ್ರದರ್ಶನ, ವೀಡಿಯೋ ಪ್ರದರ್ಶನ ನಡೆಯಿತು.



Friday 19 July 2019

ಪಿ. ಟಿ. ಎ ಹಾಗೂ ಹಳೆ ವಿದ್ಯಾರ್ಥಿ ಸಂಘದ ಜಂಟಿ ಸಭೆ

     ಕುಳೂರು ಶಾಲಾ ಪ್ರೀ ಪ್ರೈಮರಿ ವಿಭಾಗಕ್ಕೆ ತೆರವುಗೊಂಡ ಅಧ್ಯಾಪಕಿ ಹುದ್ದೆಯನ್ನು ಭರ್ತಿಗೊಳಿಸಲು ತೀರ್ಮಾನ ಕೈಗೊಳ್ಳಲು ಶಾಲಾ ರಕ್ಷಕ-ಶಿಕ್ಷಕ ಸಂಘ ಹಾಗೂ ಹಳೆ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿಯ ಜಂಟಿ ತುರ್ತು ಸಭೆಯನ್ನು ತಾ. 19-07-2019 ನೇ ಶುಕ್ರವಾರದಂದು ಸಂಜೆ ಕರೆಯಲಾಯಿತು.


ಬಯಲು ಪ್ರವಾಸ

ಕೇಳಿತು ಓ ಬೇಲೆ ಉಯಿಲು; ಗದ್ದೆಯಲ್ಲಿ ನೇಜಿ ನೆಟ್ಟ ಕುಳೂರು ಶಾಲಾ ಮಕ್ಕಳು:

        ಇಂದಿನ ಆಧುನಿಕ ಯುಗದಲ್ಲಿ ಕಲಿಕೆಯು ನಿರಂತರವಾಗಿರಬೇಕು, ಪರಿಸರದೊಂದಿಗೆ ಪ್ರಯೋಗಾತ್ಮಕವಾಗಿ ಸ್ವಯಂ ಕಲಿಕೆ ನಡೆಯಬೇಕು. ಅದಕ್ಕೆ ತಕ್ಕುದಾದ ವಾತಾವರಣವನ್ನು ಶಾಲೆಗಳಲ್ಲಿ ಸೃಷ್ಟಿಸಬೇಕು. ನಮ್ಮ ಹಿಂದಿನ ತಲೆಮಾರಿನವರ ಅನುಭವ ಪಾಠಗಳು ಎಲ್ಲಕ್ಕಿಂತ ಶ್ರೇಷ್ಠ. ಇದು ಈಗಿನ ವಿದ್ಯಾರ್ಥಿಗಳಿಗೆ ಸಿಗುವ ಉದ್ದೇಶದಿಂದ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಬಯಲು ಪ್ರವಾಸ ಕೈಗೊಂಡು ಬೇಸಾಯದ ನೈಜ ಅನುಭವವನ್ನು ಪಡೆದುಕೊಂಡರು.
       ಕುಳೂರು ಪೊಯ್ಯೆಲ್ ಪಿ. ಆರ್ ಶೆಟ್ಟಿಯವರ ಕೃಷಿ ಭೂಮಿಗೆ ಭೇಟಿ ನೀಡಿದ ಶಾಲಾ ವಿದ್ಯಾರ್ಥಿಗಳಿಗೆ ನೇಜಿ ನೆಡುತ್ತಿದ್ದ ಪೊಯ್ಯೆಲ್ ರಾಜೀವಕ್ಕನ ಓ ಬೇಲೆ ಹಾಡು ಸ್ವಾಗತವನ್ನು ಕೋರುವಂತಿತ್ತು. ನೇಜಿ ನೆಡುತ್ತಿದ್ದ ಹೆಂಗಸರು ಮಕ್ಕಳಿಗೆ ನೇಜಿ ನೆಡುವ ಅವಕಾಶವನ್ನು ಕೊಟ್ಟು ಬೇಸಾಯದ ಅನುಭವವನ್ನು ಮಾಡಿಸಿದರು. ಮಕ್ಕಳು ಓ ಬೇಲೆ ಹಾಡನ್ನು ಹಾಡುತ್ತಾ, ನಲಿಯುತ್ತಾ ಖುಷಿಯಿಂದ ನೇಜಿ ನೆಟ್ಟರು. ಜೊತೆಗೆ ಕೃಷಿಕರಾದ ಪ್ರಮೋದ್ ಶೆಟ್ಟಿ ಯವರೊಂದಿಗೆ ಸಂದರ್ಶನ ನಡೆಸಿ ಕೃಷಿಗೆ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಪಡೆದುಕೊಂಡರು. ದಾರಿ ಮಧ್ಯೆ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಚಾರ್ಲದ ಜಯರಾಜ್ ಶೆಟ್ಟಿ ಯವರ ಕೋಳಿ ಫಾರಂಗೆ ಭೇಟಿ ನೀಡಿ ಮಾಹಿತಿಗಳನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ ಜೊತೆಗಿದ್ದು ಸಹಕರಿಸಿದರು.










Thursday 18 July 2019

ನಲ್ಮೆಯ ಟೀಚರಿಗೆ ಪ್ರೀತಿಯ ವಿದಾಯ

         ಕುಳೂರು ಶಾಲೆಯು ಮಾದರಿ ಶಾಲೆಯಾಗಿ ರೂಪುಗೊಳ್ಳಲು ಹಲವಾರು ಕಾರಣಗಳಿವೆ. ಹಿಂದೆಂದೂ ಕಾಣದಂತಹ ಹಳೆ ವಿದ್ಯಾರ್ಥಿಗಳ ಪ್ರೋತ್ಸಾಹ, ಊರ ವಿದ್ಯಾಭಿಮಾನಿಗಳ ಸಹಕಾರ, ಶಾಲಾ ರಕ್ಷಕ-ಶಿಕ್ಷಕ ಸಂಘದ ಬೆಂಬಲ, ಶಾಲಾ ಅಧ್ಯಾಪಕ ವೃಂದದ ನಿಸ್ವಾರ್ಥ ಸೇವಾ ಮನೋಭಾವ ಹೀಗೆ ಹತ್ತು ಹಲವು ಕಾರಣಗಳಿಂದ ಶಾಲೆಯು ದಿನದಿಂದ ದಿನಕ್ಕೆ ಪ್ರಗತಿಯತ್ತ ಸಾಗುತ್ತಿದೆ. ಸಮಾಜದ ಕೇಂದ್ರ ಬಿಂದುವಾಗಿರುವ ನಮ್ಮ ಕುಳೂರು ಶಾಲೆಯಲ್ಲಿ ಖಾಯಂ ಅಧ್ಯಾಪಕರ ಜೊತೆಗೆ ತಾತ್ಕಾಲಿಕವಾಗಿ ನಿಯೋಜಿಸಲಾದ ಅಧ್ಯಾಪಕ ವೃಂದವೂ ಶಾಲಾಭಿವೃದ್ಧಿಗೆ ಅವಿರತ ಶ್ರಮ ವಹಿಸುತ್ತಿದ್ದು ಶಾಲೆಗೆ ನೀಡುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಪಠ್ಯ ಚಟುವಟಿಕೆಗಳ ಜೊತೆಗೆ ಪಾಠ್ಯೆತರ ಚಟುವಟಿಕೆಗಳಲ್ಲೂ ಎಲ್ಲರೂ ಸಮಾನ ಮನಸ್ಕರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದೇ ಕುಳೂರು ಶಾಲೆಗೆ ಹೆಮ್ಮೆ. ಈ ಸಾಲಿಗೆ ಸೇರಿಕೊಂಡವರಲ್ಲಿ ಪ್ರೀ ಪ್ರೈಮರಿ ವಿಭಾಗದ ಅಧ್ಯಾಪಿಕೆ ರಮೀಝ ಟೀಚರ್ ಕೂಡಾ ಒಬ್ಬರು.
       ಕುಳೂರು ಶಾಲೆಯಲ್ಲಿ ಪ್ರೀ ಪ್ರೈಮರಿ ಆರಂಭವಾದಂದಿನಿಂದ ನಮ್ಮ ಶಾಲೆಯ ಮುದ್ದು ಕಂದಮ್ಮಗಳ ಪ್ರೀತಿಯ ಟೀಚರ್ ಆಗಿ ಕಾರ್ಯ ನಿರ್ವಹಿಸಿದ ರಮೀಝ ಟೀಚರ್ ಈ ವರ್ಷ ಅಧ್ಯಾಪಕ ತರಬೇತಿಯನ್ನು ಪಡೆಯಲು ಟಿ. ಟಿ. ಸಿ ಯಲ್ಲಿ ಸೀಟು ಸಿಕ್ಕಿದ್ದು ತಮ್ಮ ಅಧ್ಯಾಪನ ವೃತ್ತಿ ಜೀವನಕ್ಕಾಗಿ ತರಬೇತಿಯನ್ನು ಪಡೆಯಲು ಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ ಶಾಲೆಯಲ್ಲಿ ತಮ್ಮ ತಾತ್ಕಾಲಿಕ ಸೇವೆಯನ್ನು ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. ತಮ್ಮ ಪ್ರೀತಿಯ ಮುದ್ದು ಕಂದಮ್ಮಗಳನ್ನು ಬಿಟ್ಟು ಹೋಗುವ ಕ್ಷಣದಲ್ಲಿ, ಭಾರವಾದ ಹೃದಯದಿಂದ ಬೀಳ್ಕೊಡುವ ಅನಿವಾರ್ಯತೆ. ಈ ಸಂದರ್ಭದಲ್ಲಿ ಮಕ್ಕಳಿಗೆಲ್ಲಾ ಶುಭವನ್ನು ಕೋರಿ, ಐಸ್ ಕ್ರೀಮ್ ನೀಡಿ ಸಹಕರಿಸಿದ ಎಲ್ಲರನ್ನೂ ಸ್ಮರಿಸಿ ಒಲ್ಲದ ಮನಸ್ಸಿನಿಂದ ಶಾಲೆಗೆ ವಿದಾಯವನ್ನು ಹೇಳಿದರು. ಈ ಸಂದರ್ಭದಲ್ಲಿ ಸಹೋದ್ಯೋಗಿಗಳು, ಶಾಲಾ ವಿದ್ಯಾರ್ಥಿಗಳು ರಮೀಝ ಟೀಚರಿಗೆ ಶುಭ ಹಾರೈಸಿ, ಬೀಳ್ಕೊಟ್ಟಾಗ ಕಣ್ಣಂಚಿನಲ್ಲಿ ನೀರು ತುಂಬಿದ್ದು ಎಲ್ಲರಲ್ಲೂ ಬೇಸರದ ಛಾಯೆಯನ್ನು ಮೂಡಿಸಿತ್ತು. ಏನೇ ಆದರೂ ನಮ್ಮ ಕುಳೂರು ಶಾಲೆಯಲ್ಲಿ ಇದ್ದಷ್ಟು ದಿವಸ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ ರಮೀಝ ಟೀಚರಿಗೆ ಶುಭವಾಗಲಿ, ಮಂದಿನ ದಿನಗಳಲ್ಲಿ ನಮ್ಮ ಶಾಲೆಯಲ್ಲೇ ಅಧ್ಯಾಪನ ಸೇವೆಯನ್ನು ಸಲ್ಲಿಸುವಂತಹ ಅವಕಾಶ ಬರಲಿ ಎಂದು ಮನದಾಳದ ಹಾರೈಕೆ.




Sunday 14 July 2019

ಉಚಿತ ವೈದ್ಯಕೀಯ ಶಿಬಿರ

        ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೀಂಜ ಗ್ರಾಮ ಪಂಚಾಯತು, ಹಳೆ ವಿದ್ಯಾರ್ಥಿ ಸಂಘ, ರಕ್ಷಕ-ಶಿಕ್ಷಕ ಸಂಘ, ಮೀಂಜ ಆಯುರ್ವೇದಿಕ್ ಹಾಗೂ ಹೋಮಿಯೋ ಆಸ್ಪತ್ರೆಗಳ ಜಂಟಿ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಿತು. 
       ಕಾರ್ಯಕ್ರಮದ ಉದ್ಘಾಟನೆಯನ್ನು ಮೀಂಜ ಗ್ರಾಮ ಪಂಚಾಯತಿನ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷರಾದ ಮೊಹಮ್ಮದ್ ಕುಂಞಿ ನೆರವೇರಿಸಿದರು. ಅಧ್ಯಕ್ಷತೆಯನ್ನು ವಾರ್ಡ್ ಸದಸ್ಯೆ ಚಂದ್ರಾವತಿ ವಿ. ಪಿ ವಹಿಸಿದ್ದರು. ಮೀಂಜ ಆಯುರ್ವೇದಿಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಜಾರಾಮ ಡಿ. ಕೆ ರವರು ಆರೋಗ್ಯ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮೀಂಜ ಹೋಮಿಯೋ ಆಸ್ಪತ್ರೆಯ ಡಾ. ನಮಿತಾ ಎಸ್, ಪೈವಳಿಕೆ ವಲಯದ ವೈದ್ಯಾಧಿಕಾರಿ ಡಾ. ಗಣೇಶ್, ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ಪಿ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಪೊಯ್ಯೆಲ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಶಿಕುಮಾರ್ ಕುಳೂರು ಸ್ವಾಗತಿಸಿ, ಅಧ್ಯಾಪಿಕೆ ರಮೀಝ ವಂದಿಸಿದರು. ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಆಯುರ್ವೇದಿಕ್ ಹಾಗೂ ಹೋಮಿಯೋಪತಿ ವೈದ್ಯಕೀಯ ಶಿಬಿರ ನಡೆಯಿತು. ಕುಳೂರು ಶಾಲಾ ಹಳೆ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ-ಶಿಕ್ಷಕ ಸಂಘದ ಸದಸ್ಯರು, ಶಾಲಾ ಅಧ್ಯಾಪಿಕೆಯರು ಉಪಸ್ಥಿತರಿದ್ದು ಸಹಕರಿಸಿದರು.