FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Saturday 2 December 2023

ಮಂಜೇಶ್ವರ ಶಾಸಕರಿಂದ ಕುಳೂರು ಶಾಲಾ ನೂತನ ಕಟ್ಟಡದ ಉದ್ಘಾಟನೆ:

         ಮಂಜೇಶ್ವರ : ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಯೋಜನೆಯಡಿ ಮಂಜೂರಾಗಿ ನಿರ್ಮಾಣಗೊಂಡ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಅಡುಗೆ ಕೋಣೆ ಹಾಗೂ ಊಟದ ಸಭಾಂಗಣ ಕಟ್ಟಡದ ಉದ್ಘಾಟನಾ ಸಮಾರಂಭ ಇಂದು ನಡೆಯಿತು. ಉದ್ಘಾಟನೆಯನ್ನು ಮಂಜೇಶ್ವರದ ಶಾಸಕರಾದ ಶ್ರೀ ಎ.ಕೆ.ಎಂ ಅಶ್ರಫ್ ರವರು ನೆರವೇರಿಸಿದರು.

Tuesday 14 November 2023

ಕುಳೂರು ಶಾಲೆಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ

          ಭಾರತದ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರುರವರ ಜನ್ಮದಿನಾಚರಣೆಯಾದ ಮಕ್ಕಳ ದಿನಾಚರಣೆಯನ್ನು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಹೇರಂಬ ಇಂಡಸ್ಟ್ರೀಸ್ ವತಿಯಿಂದ ಕೊಡುಗೈ ದಾನಿ ಶ್ರೀ ಸದಾಶಿವ ಕೆ ಶೆಟ್ಟಿ ಕುಳೂರು ಕನ್ಯಾನ ಹಾಗೂ ಶ್ರೀ ರಘುರಾಮ್ ಕೆ ಶೆಟ್ಟಿ ಕುಳೂರು ಕನ್ಯಾನ ಇವರಿಂದ ಶಾಲೆಗೆ ನೂತನ ಶಾಲಾ ವಾಹನ ಕೊಡುಗೆ:

       ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಈ ವರ್ಷ ಶತಮಾನೋತ್ಸವವನ್ನು ಆಚರಿಸುತ್ತಿದ್ದು ಪ್ರಯುಕ್ತ ಶಾಲಾ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಸದಾಶಿವ ಕೆ ಶೆಟ್ಟಿ ಕುಳೂರು ಕನ್ಯಾನ ಹಾಗೂ ಶ್ರೀ ರಘುರಾಮ್ ಕೆ ಶೆಟ್ಟಿ ಕುಳೂರು ಕನ್ಯಾನರವರಿಂದ ಹೇರಂಬ ಇಂಡಸ್ಟ್ರೀಸ್ ಮುಂಬೈ ಇದರ ವತಿಯಿಂದ ಶಾಲಾ ವಾಹನದ ಕೊಡುಗೆಯು ಹಸ್ತಾಂತರವು ಇಂದು ಶಾಲೆಯಲ್ಲಿ ನಡೆಯಿತು.

Monday 2 October 2023

ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ:

       ಕುಳೂರಿನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಭಾರತದ ಎರಡನೇ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಆಚರಣೆ ನಡೆಯಿತು.

       ಆ ಪ್ರಯುಕ್ತ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಬಳಿಕ ಸೇವನಾ ವಾರಾಚರಣೆಯ ಭಾಗವಾಗಿ ಶಾಲಾ ಪರಿಸರ ಶುಚೀಕರಣ ನಡೆಸಲಾಯಿತು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಸೌಮ್ಯ ಪಿ, ಶಾಲಾ ಶಿಕ್ಷಕರಾದ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ, ಶ್ರೀಮತಿ ಅಶ್ವಿನಿ ಎಂ, ಶಾಲಾ ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಜಯರಾಜ್ ಶೆಟ್ಟಿ ಚಾರ್ಲ ಹಾಗೂ ಕಟ್ಟಡ ಸಮಿತಿಯ ಕಾರ್ಯದರ್ಶಿ ಶ್ರೀ ಅಬ್ದುಲ್ ಮಜೀದ್ ಸಾಹೇಬ್ ಚಾರ್ಲ ಉಪಸ್ಥಿತರಿದ್ದರು.












Tuesday 5 September 2023

ಶಿಕ್ಷಕರ ದಿನಾಚರಣೆ:

         ಭಾರತದ ಮೊದಲ ಉಪರಾಷ್ಟ್ರಪತಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯಾಗಿ ಇಂದು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಳವಾಗಿ ಆಚರಿಸಲಾಯಿತು. 

Friday 25 August 2023

ಓಣಂ ಆಚರಣೆ:

        ಕೇರಳದ ಪ್ರಾಂತೀಯ ಹಬ್ಬವಾದ ಓಣಂ ಹಬ್ಬದ ಆಚರಣೆಯನ್ನು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಡಗರದಿಂದ ನಡೆಸಲಾಯಿತು. 

Saturday 19 August 2023

ಶಾಲಾ ಶತಮಾನೋತ್ಸವದ ಸವಿ ನೆನಪಿಗಾಗಿ ಭವ್ಯ ರಂಗಮಂದಿರದ ಕಾಮಗಾರಿಗೆ ಚಾಲನೆ:

      ಹತ್ತು ಸಂವತ್ಸರಗಳನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿ ಶತಮಾನೋತ್ಸವದ ಅಂಚಿಗೆ ಬಂದಿರುವ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಈ ವರ್ಷ ಶತಮಾನೋತ್ಸವವನ್ನು ಆಚರಿಸುತ್ತಿದೆ. ಸಮಾಜಕ್ಕೆ ಸಾವಿರಾರು  ವಿದ್ಯಾವಂತರನ್ನು ನೀಡಿ, ದೇಶ ವಿದೇಶಗಳಲ್ಲಿ ಗುರುತಿಸಿಕೊಂಡ ಹಲವಾರು ಮಹನೀಯರ ಪ್ರಾಥಮಿಕ ವಿದ್ಯಾಭ್ಯಾಸವು ಕುಳೂರು ಶಾಲೆಯಲ್ಲಿ ಆಗಿರುವುದು ಎಂಬುದು ಈ ಶಾಲೆಯ ಹೆಗ್ಗಳಿಕೆ. ಇಂತಹ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಈಗ ಶಾಲೆಯು ಅಭಿವೃದ್ಧಿ ಪಥದತ್ತ ಸಾಗುತ್ತಿದೆ.  

ಎಲ್ಲರಿಗೂ ಸುಸ್ವಾಗತ

 


Tuesday 15 August 2023

ಶತಮಾನೋತ್ಸವ ಸಂಭ್ರಮದಲ್ಲಿರುವ ಕುಳೂರು ಶಾಲೆಯಲ್ಲಿ ಸ್ಮರಣೀಯ ಸ್ವಾತಂತ್ರ್ಯೋತ್ಸವದ ಆಚರಣೆ:

        ದೇಶದ ಐಕ್ಯತೆಯನ್ನು ಒಂದೇ ಸೂರಿನಡಿಯಲ್ಲಿ ತರುವ ಭಾರತದ ಅಭಿಮಾನದ ಆಚರಣೆಯಾದ 77 ನೇ ಸ್ವಾತಂತ್ರ್ಯೋತ್ಸವವನ್ನು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. 

Saturday 29 July 2023

ಕುಳೂರು ಶಾಲೆಯಲ್ಲಿ ಮೇಳೈಸಿದ 'ಆಟಿಡೊಂಜಿ ದಿನ'

         ತುಳುನಾಡಿನಲ್ಲಿ ಆಟಿ ತಿಂಗಳಿಗೆ ವಿಶೇಷ ಪ್ರಾಶಸ್ತ್ಯವಿದೆ. ನಮ್ಮ ಪೂರ್ವಿಕರು ಮಳೆಗಾಲದ ಈ ಕಷ್ಟದ ಸಮಯವನ್ನು ಕಳೆಯಲು, ರೋಗ ರುಜಿನಾದಿಗಳಿಂದ ಪಾರಾಗಲು ತಮ್ಮ ಆಹಾರ ಪದ್ಧತಿ, ಜೀವನ ಶೈಲಿಯನ್ನು ವಿಶೇಷವಾಗಿ ಕೊಂಡೊಯ್ಯುವ ತುಳುನಾಡಿನ ಸಂಸ್ಕೃತಿಯು ಎಲ್ಲರನ್ನೂ ಆಕರ್ಷಿಸುತ್ತದೆ. ಆದರೆ ಕಾಲ ಬದಲಾದಂತೆ ಹಿಂದಿನ ಜೀವನ ಶೈಲಿ, ಆಹಾರ ಕ್ರಮಗಳೂ ಬದಲಾದವು. ಅವುಗಳನ್ನು ಈಗಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿಡೊಂಜಿ ದಿನ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಜುಲೈ ತಿಂಗಳ ಮಧ್ಯಾಹ್ನದೂಟಕ್ಕೆ ಸಹಕರಿಸಿದ ಮಹನೀಯರು

 


Wednesday 26 July 2023

ಕಾರ್ಗಿಲ್ ವಿಜಯ ದಿವಸ ಆಚರಣೆ

           ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರನ್ನು ಸ್ಮರಿಸಲು ಹಾಗೂ ಕಾರ್ಗಿಲ್ ಯುದ್ಧದ ವಿಜಯ ದಿವಸವಾದ ಇಂದು ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು. 

Friday 21 July 2023

ಚಾಂದ್ರ ದಿನ ಆಚರಣೆ

        ಬಾಹ್ಯಾಕಾಶ ಯಾತ್ರೆಯ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಸಲುವಾಗಿ, ಮಾನವನು ಚಂದ್ರನ ಮೇಲೆ ಕಾಲಿಟ್ಟ ದಿನದ ಸವಿ ನೆನಪಿಗಾಗಿ ಇಂದು ಶಾಲೆಯಲ್ಲಿ ಚಾಂದ್ರ ದಿನವನ್ನು ಆಚರಿಸಲಾಯಿತು. 

Monday 26 June 2023

ವಾಚನ ವಾರಾಚರಣೆಯ ಸಮಾರೋಪ ಸಮಾರಂಭ; ಮಕ್ಕಳ ಬಾಲಸಭೆ ಉದ್ಘಾಟನೆ; ಕತೋತ್ಸವಕ್ಕೆ ಚಾಲನೆ:

         ಮಕ್ಕಳಲ್ಲಿ ಪುಸ್ತಕ ಓದುವಿಕೆಯ ಆಸಕ್ತಿಯನ್ನು ಮೂಡಿಸಲು ವಿವಿಧ ಚಟುವಟಿಕೆಗಳನ್ನು ವಾಚನ ವಾರಾಚರಣೆಯೆಂಬ ಕಾರ್ಯಕ್ರಮದಲ್ಲಿ ಅಳವಡಿಸಿ ಪುಸ್ತಕ ಓದಿನ ಮಹತ್ವದ ಅರಿವನ್ನು ಮೂಡಿಸಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿನಲ್ಲಿ ವಾಚನ ವಾರಾಚರಣೆ ನಡೆಸಲಾಯಿತು. ಇದರ ಸಮಾರೋಪ ಸಮಾರಂಭ ಹಾಗೂ ಮಕ್ಕಳ ಬಾಲಸಭೆಯ ಉದ್ಘಾಟನೆಯು ಇಂದು ನಡೆಯಿತು.

ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ:

         ಮಕ್ಕಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಯಿತು.

Friday 23 June 2023

ಶಾಲಾ ವ್ಯವಸ್ಥಾಪಕ ಸಮಿತಿಯ ಮಹಾಸಭೆ ; ನೂತನ ಸಮಿತಿ ರೂಪೀಕರಣ :

         ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2023-24 ನೇ ಸಾಲಿನ ಶಾಲಾ ವ್ಯವಸ್ಥಾಪಕ ಸಮಿತಿ ರೂಪೀಕರಣ ಮಹಾಸಭೆ ನಡೆಯಿತು.

Wednesday 21 June 2023

ವಿಶ್ವ ಯೋಗ ದಿನಾಚರಣೆ:

        ಭಾರತದ ಭವ್ಯ ಪರಂಪರೆಯಲ್ಲಿ ಯೋಗ ವಿಶೇಷ ಸ್ಥಾನವನ್ನು ಪಡೆದಿದೆ. ವಿಶ್ವವೇ ಯೋಗವನ್ನು ಅನುಸರಿಸುತ್ತಿದ್ದು ಭಾರತದ ಸಂಸ್ಕೃತಿಯು ಇನ್ನಷ್ಟು ಶ್ರೇಷ್ಠತೆಯನ್ನು ಪಡೆಯುತ್ತಿದೆ. ಅಂತಹ ಯೋಗವು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟು ಕಳೆದ ಹಲವು ವರ್ಷಗಳಿಂದ ಜೂನ್ 21 ನ್ನು ವಿಶ್ವ ಯೋಗ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

Monday 19 June 2023

ವಾಚನ ದಿನಾಚರಣೆ:

         ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇರಳದ ಗ್ರಂಥಾಲಯ ಪಿತಾಮಹ ಪಿ. ಎನ್. ಪಣಿಕ್ಕರ್ ರವರ ಚರಮ ದಿನವನ್ನು ವಾಚನ ದಿನಾಚರಣೆಯಾಗಿ ಆಚರಿಸಲಾಯಿತು.

Thursday 15 June 2023

ಚುನಾವಣೆಯ ಮೂಲಕ ಶಾಲಾ ನಾಯಕನ ಆಯ್ಕೆ ; ಪ್ರಜಾಪ್ರಭುತ್ವ ವ್ಯವಸ್ಥೆಯ ನೈಜ ಅನುಭವವನ್ನು ಪಡೆದ ಶಾಲಾ ಮಕ್ಕಳು :

           ಭಾರತವು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಈ ವ್ಯವಸ್ಥೆಯ ನೈಜ ಅನುಭವವನ್ನು ಮಕ್ಕಳು ಪಡೆಯಲು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ನಾಯಕನ ಆಯ್ಕೆಗೆ ಶಾಲಾ ಚುನಾವಣೆ ನಡೆಯಿತು.

           ಹಿಂದಿನ ದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳು ತಮ್ಮ ನಾಮ ಪತ್ರವನ್ನು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಾಲಾ ಮುಖ್ಯ ಶಿಕ್ಷಕರ ಹೊಣೆಯನ್ನು ಹೊತ್ತಿರುವ ಶಾಲಾ ಶಿಕ್ಷಕಿ ಸೌಮ್ಯ ಪಿ ರವರಿಗೆ ಸಲ್ಲಿಸಿದರು. ಜೊತೆಗೆ ಅಭ್ಯರ್ಥಿಗಳು ಪ್ರಚಾರ ಕಾರ್ಯವನ್ನೂ ನಡೆಸಿದರು.

         ಇಂದು ನಡೆದ ಚುನಾವಣಾ ಪ್ರಕ್ರಿಯೆಯು ಮಕ್ಕಳಿಗೆ ನೈಜ ಅನುಭವವನ್ನು ತಂದಿತು. ಮತ ಚಲಾಯಿಸಲು ಬಂದ ಮಕ್ಕಳು ತಮ್ಮ ಕೈಗೆ ಚುನಾವಣಾ ಗುರುತನ್ನು ಹಾಕಿಸಿಕೊಂಡು, ಗೌಪ್ಯ  ಮತದಾನದ ಮೂಲಕ ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತವನ್ನು ಚಲಾಯಿಸಿದರು.

        ಚುನಾವಣಾ ಪ್ರಕ್ರಿಯೆಯನ್ನು ಶಾಲಾ ಮಕ್ಕಳೇ ನಿರ್ವಹಿಸಿದ್ದು ವಿಶೇಷವಾಗಿತ್ತು. ಶಾಲಾ ವಿದ್ಯಾರ್ಥಿಗಳಾದ ಕುಮಾರಿ ಸಾಕ್ಷಿ ಎ, ಯದ್ವಿ ಕೆ ಶೆಟ್ಟಿ, ದೀಕ್ಷ ಎ, ಗಣ್ಯ, ಕಿಶನ್ ಡಿ ಹಾಗೂ ಪ್ರಜ್ವಲ್ ಡಿ ಈ ಪ್ರಕ್ರಿಯೆಯಲ್ಲಿ ಸಹಕರಿಸಿದರು.

      ಬಳಿಕ ಚುನಾವಣಾ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತ ಎಣಿಕೆ ನಡೆಯಿತು. ತೀವ್ರ ಪೈಪೋಟಿಯನ್ನು ಇತ್ತ ಇಬ್ಬರು ಅಭ್ಯರ್ಥಿಗಳು ಅಂತಿಮವಾಗಿ ಸಮಾನ ಮತಗಳನ್ನು ಪಡೆಯುವ ಮೂಲಕ ಚುನಾವಣೆಯನ್ನು ಇನ್ನಷ್ಟು ರಂಗೇರುವಂತೆ ಮಾಡಿದರು. ಬಳಿಕ ಚೀಟಿ ಎತ್ತುವ ಮೂಲಕ ನಾಯಕ ಹಾಗೂ ಉಪ ನಾಯಕರನ್ನು ಆಯ್ಕೆ ಮಾಡಲಾಯಿತು. ಶಾಲಾ ನಾಯಕನಾಗಿ ಚಾರ್ವಿನ್ ಆಳ್ವ, ಉಪ ನಾಯಕಿಯಾಗಿ ಕುಮಾರಿ ಸಾನ್ವಿ ಶೆಟ್ಟಿ ಆಯ್ಕೆಯಾದರು. ಆರೋಗ್ಯ ಮಂತ್ರಿಯಾಗಿ ಕುಮಾರಿ ತನ್ವಿ ಎಸ್ ಪೂಜಾರಿ, ಕ್ರೀಡಾ ಮಂತ್ರಿಯಾಗಿ ಕುಮಾರಿ ಶ್ರೀನಿಕ ವಿ. ಆರ್ ಹಾಗೂ ಸಾಂಸ್ಕೃತಿಕ ಮಂತ್ರಿಯಾಗಿ ಕುಮಾರಿ ದೃಶ ಎ ಆಯ್ಕೆಯಾದರು.

        ಶಾಲಾ ಮುಖ್ಯ ಶಿಕ್ಷಕರ ಹೊಣೆಯನ್ನು ಹೊತ್ತಿರುವ ಶಿಕ್ಷಕಿ ಸೌಮ್ಯ ಪಿ ವಿಜೇತ ಅಭ್ಯರ್ಥಿಗಳಿಗೆ ಹೂ ಗುಚ್ಛ ನೀಡಿ ಅಭಿನಂದಿಸಿ, ಬಳಿಕ ಪ್ರಮಾಣ ವಚನ ಬೋಧಿಸಿದರು. ಬಳಿಕ ವಿಜೇತ ಅಭ್ಯರ್ಥಿಗಳ ವಿಜಯ ಘೋಷ ಯಾತ್ರೆ ನಡೆಯಿತು.  ಶಾಲಾ ಶಿಕ್ಷಕ ವೃಂದ ಜೊತೆಗಿದ್ದು ಸಹಕರಿಸಿದರು. 
















Monday 5 June 2023

ವಿಶ್ವ ಪರಿಸರ ದಿನಾಚರಣೆ:

       ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. 

       ಪರಿಸರ ಸಂರಕ್ಷಣೆಯ ಕುರಿತು ಮಕ್ಕಳಿಗೆ ಅರಿವು ಮೂಡಿಸಲಾಯಿತು. ಶಾಲಾ ಪರಿಸರದಲ್ಲಿ ಗಿಡ ನೆಡಲಾಯಿತು. ಮಕ್ಕಳಿಗೆ ಪೋಸ್ಟರ್ ತಯಾರಿ, ಚಿತ್ರ ರಚನೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನೂ ಆಯೋಜಿಸಲಾಯಿತು.

      ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಪರಿಸರವನ್ನು ಶುಚೀಕರಣ ಮಾಡಲಾಯಿತು. ಹಳೆ ವಿದ್ಯಾರ್ಥಿಗಳಾದ ಹರಿರಾಮ ಕುಳೂರು ಹಾಗೂ ಅಬ್ದುಲ್ ಮಜೀದ್ ಸಾಹೇಬ್ ಚಾರ್ಲ ಜೊತೆಗಿದ್ದು ಸಹಕರಿಸಿದರು. ಶಾಲಾ ಶಿಕ್ಷಕ ವೃಂದ ಕಾರ್ಯಕ್ರಮವನ್ನು ಸಂಯೋಜಿಸಿದರು. 









Thursday 1 June 2023

ಮೀಂಜ ಪಂಚಾಯತು ಮಟ್ಟದ ಶಾಲಾ ಪ್ರವೇಶೋತ್ಸವ :

           ಕೇರಳದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಊರಿನ ಹೆಮ್ಮೆಯ ಕೇಂದ್ರಗಳನ್ನಾಗಿಸುವ ದೃಷ್ಟಿಯಿಂದ ಸಾರ್ವಜನಿಕರು ಶಾಲೆಗಳತ್ತ ಗಮನ ಸೆಳೆಯುವಂತೆ ಮಾಡಲು ಸರಕಾರವು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅದರಂತೆ ಶಾಲಾರಂಭದ ದಿನವನ್ನು ಶಾಲಾ ಪ್ರವೇಶೋತ್ಸವ ಎಂಬ ಸಂಭ್ರಮದ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಈ ಸಂಬಂಧ ಮೀಂಜ ಪಂಚಾಯತು ಮಟ್ಟದ ಶಾಲಾ ಪ್ರವೇಶೋತ್ಸವವು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದಿಂದ ಜರಗಿತು.

Monday 22 May 2023

ಪ್ರವೇಶೋತ್ಸವದ ಸಿದ್ಧತೆಗೆ ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿ ಸಭೆ:

          2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾರಂಭಕ್ಕೆ ಕೆಲವೇ ದಿನಗಳು ಬಾಕಿ ಇದೆ. ಪ್ರವೇಶೋತ್ಸವದ ಸಿದ್ಧತೆಗೆ ಶಾಲಾ ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿ ಸಭೆ ಇಂದು ನಡೆಸಲಾಯಿತು.

          ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಎಲಿಯಾಣ ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿ ಕುಳೂರು ಆಗಮಿಸಿದ್ದರು. ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. 

          ಪ್ರವೇಶೋತ್ಸವದಂದು ಮಾಡಬೇಕಾದ ಸಿದ್ಧತೆಗಳ ಬಗ್ಗೆ ಚರ್ಚಿಸಲಾಯಿತು. ಶಾಲಾ ಶುಚೀಕರಣವನ್ನು ತಾ. 26-05-2023 ನೇ ಶುಕ್ರವಾರದಂದು ನಡೆಸಲು ತೀರ್ಮಾನಿಸಲಾಯಿತು. ಈ ವರ್ಷ ಶತಮಾನೋತ್ಸವ ಆಚರಿಸುತ್ತಿರುವುದರಿಂದ ಪ್ರವೇಶೋತ್ಸವವನ್ನು ವಿಶೇಷವಾಗಿ ಆಚರಿಸಲು ತೀರ್ಮಾನಿಸಲಾಯಿತು. ಜೊತೆಗೆ ಅಂದು ಶಾಲಾ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಸದಾಶಿವ ಕೆ ಶೆಟ್ಟಿ ಕುಳೂರು ಕನ್ಯಾನ ರವರು ಕೊಡುಗೆ ನೀಡಿದ ಶಾಲಾ ವಾಹನದ ಉದ್ಘಾಟನೆ ನಡೆಯುವುದೆಂದು ತೀರ್ಮಾನಿಸಲಾಯಿತು.

        ಶಾಲಾ ಶಿಕ್ಷಕಿ ಸೌಮ್ಯ ಪಿ ಸಭೆಯನ್ನು ಮುನ್ನಡೆಸಿದರು. ಶಾಲಾ ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ ಶಿಕ್ಷಕಿ ಅಶ್ವಿನಿ ವಂದಿಸಿದರು.




2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾರಂಭಕ್ಕೆ ದಿನಗಣನೆ ; ಪಾಠ ಪುಸ್ತಕ ಹಾಗೂ ಸಮವಸ್ತ್ರ ವಿತರಣೆ :

          2023-24 ನೇ ಶೈಕ್ಷಣಿಕ ವರ್ಷದ ಶಾಲಾರಂಭಕ್ಕೆ ಕೆಲವೇ ದಿನಗಳಿದ್ದು ಆ ಸಂಬಂಧ ಶಾಲಾ ಮಕ್ಕಳಿಗೆ ಪಾಠ ಪುಸ್ತಕಗಳು ಹಾಗೂ ಸಮವಸ್ತ್ರಗಳ ವಿತರಣಾ ಕಾರ್ಯಕ್ರಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. 

          ಕಾರ್ಯಕ್ರಮವನ್ನು ವಾರ್ಡ್ ಸದಸ್ಯ ಜನಾರ್ಧನ ಪೂಜಾರಿ ಕುಳೂರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಅಧ್ಯಕ್ಷ ಸತೀಶ್ ಎಲಿಯಾಣ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತೆಯರ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸುನೀತ ಕುಳೂರು, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಯೋಗೀಶ್ ಶೆಟ್ಟಿ ಪೊಯ್ಯೇಲ್ ಉಪಸ್ಥಿತರಿದ್ದರು.

          2023-24 ನೇ ಸಾಲಿನ ಶಾಲಾ ಮಕ್ಕಳಿಗೆ ಸರಕಾರದಿಂದ ದೊರೆತ ಉಚಿತ ಪಾಠ ಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು. ಜೊತೆಗೆ ಈ ಶೈಕ್ಷಣಿಕ ವರ್ಷವು ಶಾಲೆಯು ಶತಮಾನೋತ್ಸವವನ್ನು ಆಚರಿಸುತ್ತಿರುವುದರಿಂದ ಮುಂಬರುವ ಎಲ್ಲಾ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಿಗೆ ಶುಭ ಹಾರೈಸಲಾಯಿತು.

          ಶಾಲಾ ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ ಶಿಕ್ಷಕಿ ಸೌಮ್ಯ ಪಿ ವಂದಿಸಿದರು.










Sunday 2 April 2023

ಕುಳೂರು ಶಾಲಾ ಶತಮಾನೋತ್ಸವದ ಉದ್ಘಾಟನಾ ಸಮಾರಂಭ ;

         ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಉದ್ಘಾಟನಾ ಸಮಾರಂಭವು ವಿಜೃಂಭಣೆಯಿಂದ ಜರಗಿತು.

        ಬೆಳಿಗ್ಗೆ ಶಾಲಾ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಸದಾಶಿವ ಕೆ ಶೆಟ್ಟಿ ಕುಳೂರು ಕನ್ಯಾನ ಹಾಗೂ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಂಚಿಲರವರು ಧ್ವಜಾರೋಹಣಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಿತು.
       ಅಪರಾಹ್ನ ನಡೆದ ಶತಮಾನೋತ್ಸವ ಉದ್ಘಾಟನಾ ಕಾರ್ಯಕ್ರಮವನ್ನು ಕಾಸರಗೋಡಿನ ಮಾನ್ಯ ಸಂಸದರಾದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಬಳಿಕ ಅವರು ಮಾತನಾಡುತ್ತಾ 'ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವಲ್ಲಿ ಹೆತ್ತವರು ಮತ್ತು ಶಿಕ್ಷಕರ ಪಾತ್ರ ಮಹತ್ತರವಾದುದು. ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವುದೇ ಶಿಕ್ಷಣದ ಉದ್ದೇಶವಾಗಿದೆ' ಎಂದರು.
      ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರದ ಮಾನ್ಯ ಶಾಸಕರಾದ ಎ. ಕೆ. ಎಂ ಅಶ್ರಫ್ ವಹಿಸಿದ್ದರು. ಶಾಲಾ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರೂ, ಹೇರಂಬ ಇಂಡಸ್ಟ್ರೀಸ್ ಮುಂಬೈನ ಅಧ್ಯಕ್ಷರಾದ ಸದಾಶಿವ ಕೆ ಶೆಟ್ಟಿ ಕುಳೂರು ಕನ್ಯಾನ ರವರು ಶಾಲಾ ಶತಮಾನೋತ್ಸವದ ಸವಿ ನೆನಪಿಗಾಗಿ ಶಾಲಾ ವಾಹನ ಹಾಗೂ ಸುಸಜ್ಜಿತ ರಂಗ ಮಂದಿರವನ್ನು ಕೊಡುಗೆಯಾಗಿ ನೀಡುವ ಘೋಷಣೆ ಮಾಡುವ ಮೂಲಕ ಗಮನ ಸೆಳೆದರು.
      ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮೀಂಜ ಗ್ರಾಮ ಪಂಚಾಯತಿನ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ, ಉಪಾಧ್ಯಕ್ಷರಾದ ಜಯರಾಮ ಬಲ್ಲಂಗುಡೇಲ್, ವಿದ್ಯಾಭ್ಯಾಸ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಸರಸ್ವತಿ ಕೆ, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯರಾದ ಕಮಲಾಕ್ಷಿ, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರಾದ ಅಶ್ವಿನಿ ಎಂ. ಎಲ್, ಮೀಂಜ ಗ್ರಾಮ ಪಂಚಾಯತ್ ಸದಸ್ಯರಾದ ಜನಾರ್ಧನ ಪೂಜಾರಿ ಕುಳೂರು, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ, ಯುವ ಉದ್ಯಮಿಯೂ, ಶಾಲಾ ಶತಮಾನೋತ್ಸವ ಸಮಿತಿಯ ಗೌರವ ಸಲಹೆಗಾರರೂ ಆದ ಮೋಹನ್ ಶೆಟ್ಟಿ ಮಜ್ಜಾರ್ ಆಗಮಿಸಿದ್ದರು.
       ಶಾಲಾ ಶತಮಾನೋತ್ಸವದ ಸವಿ ನೆನಪಿಗಾಗಿ ರಚನೆಯಾಗಲಿರುವ 'ಅರಳು' ಸ್ಮರಣ ಸಂಚಿಕೆಯ ಮುಖ ಪುಟವನ್ನು ಕಾಸರಗೋಡಿನ ಮಾನ್ಯ ಸಂಸದರು ಅನಾವರಣಗೊಳಿಸಿದರು.
       ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸತೀಶ್ ಎಲಿಯಾಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹಮ್ಮದ್ ಹಾಜಿ ಕಂಚಿಲ, ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸುನೀತ ಕುಳೂರು, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸುಹಾಸಿನಿ ಕುಳೂರು ಉಪಸ್ಥಿತರಿದ್ದರು.
        ಶಾಲಾ ಮುಖ್ಯ ಶಿಕ್ಷಕರಾಗಿದ್ದ ಸತ್ಯನಾರಾಯಣ ಶರ್ಮ ಪಿ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
      ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಸುಮಾರು ಆರು ವರ್ಷಗಳ ಕಾಲ ಮುಖ್ಯ ಶಿಕ್ಷಕರಾಗಿ ದುಡಿದು, ಶಾಲೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಸತ್ಯನಾರಾಯಣ ಶರ್ಮ ಪಿ ರವರನ್ನು ಶಾಲಾ ಶತಮಾನೋತ್ಸವ ಸಮಿತಿಯ ಪರವಾಗಿ, ಊರ ವಿದ್ಯಾಭಿಮಾನಿಗಳ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
        ಶಾಲಾ ಶತಮಾನೋತ್ಸವ ಉದ್ಘಾಟನಾ ಸಮಾರಂಭದ ಪ್ರಯುಕ್ತ ನಡೆದ ಶಾಲಾ ಮಕ್ಕಳ ಹಾಗೂ ಊರವರ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
         ಶಾಲಾ ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಚಾರ್ಲ ಸ್ವಾಗತಿಸಿ, ಶಿಕ್ಷಕಿ ನಯನ ಎಂ ವಂದಿಸಿದರು. ಶಾಲಾ ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು.
         ಬಳಿಕ ಶಾಲಾ ಮಕ್ಕಳು, ಸ್ಥಳೀಯ ಅಂಗನವಾಡಿ ಪುಟಾಣಿಗಳು, ರಕ್ಷಕ-ಶಿಕ್ಷಕ ಸಂಘ ಮತ್ತು ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಕುಟುಂಬಶ್ರೀ ಸದಸ್ಯೆಯರು ಹಾಗೂ ಫ್ರೆಂಡ್ಸ್ ಆರ್ಟ್ಸ್ ಏಂಡ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
      ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕರಿಸಿದರು.

Monday 20 March 2023

ನಾಲ್ಕನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭ:

        ಕುಳೂರು ಶಾಲೆಯ ನಾಲ್ಕನೇ ತರಗತಿಯ ಮಕ್ಕಳ ಬೀಳ್ಕೊಡುಗೆ ಸಮಾರಂಭ ನಡೆಯಿತು. 

       ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕರಾದ ಸತ್ಯನಾರಾಯಣ ಶರ್ಮ ಪಿ ರವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಲಾ ಶಿಕ್ಷಕಿ ಸೌಮ್ಯ ಪಿ ವಹಿಸಿದ್ದರು. ಶಾಲಾ ಶಿಕ್ಷಕರಾದ ಜಯಪ್ರಶಾಂತ್ ಪಾಲೆಂಗ್ರಿ, ನಯನ ಎಂ, ಅಶ್ವಿನಿ ಎಂ ಹಾಗೂ ಚೇತನ ಉಪಸ್ಥಿತರಿದ್ದರು.

       ಮಕ್ಕಳು ಹಾಗೂ ರಕ್ಷಕರು ಶಾಲಾ ದಿನಗಳ ಬಗ್ಗೆ ಮೆಲುಕು ಹಾಕಿ, ಭಾವುಕರಾದರು. ಮಕ್ಕಳ ಜೊತೆ ರಕ್ಷಕರೂ ಶಾಲೆಯನ್ನು ಬಿಟ್ಟು ಹೋಗಲು ಮನಸ್ಸಾಗದಿರುವುದು ಅವರ ಕಣ್ಣಂಚಿನಲ್ಲಿ ಮೂಡಿದ ಕಣ್ಣೀರು ಸಾಕ್ಷಿಯಾಯಿತು. ವಿದ್ಯಾರ್ಥಿಗಳಾದ ಜೀಯ ಜೆ ಶೆಟ್ಟಿ, ಸಾನ್ವಿಕ, ಲಿಪಿಕ ಪಿ, ರಕ್ಷಕರಾದ ಜಯರಾಜ್ ಶೆಟ್ಟಿ ಚಾರ್ಲ, ಉದಯ ಕುಮಾರಿ, ಸುಹಾಸಿನಿ ಮೊದಲಾದವರು ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ಮಕ್ಕಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.

ವಿದ್ಯಾರ್ಥಿನಿ ಕುಮಾರಿ ಸಾನ್ವಿಕ ಸ್ವಾಗತಿಸಿ, ವಿದ್ಯಾರ್ಥಿನಿ ಕುಮಾರಿ ಜೀಯ ಜೆ ಶೆಟ್ಟಿ ವಂದಿಸಿದಳು.