FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Saturday 19 December 2020

ಎರಡನೇ ಹಂತದ ಮಕ್ಕಳ ಮನೆ ಮನೆ ಭೇಟಿ ಕಾರ್ಯಕ್ರಮ

       ಕುಳೂರು ಶಾಲಾ ಮಕ್ಕಳ ಆನ್ಲೈನ್ ಕ್ಲಾಸ್ ಮತ್ತು ಕಲಿಕಾ ಚಟುವಟಿಕೆಗಳ ಕುರಿತು ತಿಳಿಯಲು ಎರಡನೇ ಹಂತದ ಮನೆ ಮನೆ ಭೇಟಿಯನ್ನು ಕಳೆದ ವಾರಗಳಲ್ಲಿ ನಡೆಸಲಾಯಿತು. ಮಕ್ಕಳ ಓದುವಿಕೆ, ಬರವಣಿಗೆಯ ಕುರಿತು ತಿಳಿದು ಅವರ ಕಲಿಕಾ ಮಟ್ಟವನ್ನು ಮನೆ ಭೇಟಿಯ ಮೂಲಕ ಗುರುತಿಸಲಾಯಿತು. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಮಕ್ಕಳ ಹೆತ್ತವರು ಸಹಕರಿಸಿದರು. ಜೊತೆಗೆ ಸ್ವಾತಂತ್ರ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಗೆ ನಡೆಸಿದ ಆನ್ಲೈನ್ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.










Saturday 12 December 2020

ತ್ರಿಸ್ತರ ಪಂಚಾಯತು ಚುನಾವಣೆಗೆ ಶಾಲೆಯ ಸಜ್ಜು

         ಇದೇ ಬರುವ ಸೋಮವಾರದಂದು ನಡೆಯುವ ತ್ರಿಸ್ತರ ಪಂಚಾಯತು ಚುನಾವಣೆಯಲ್ಲಿ ಎರಡು ಬೂತುಗಳನ್ನೊಳಗೊಂಡ ಮತದಾನ ಕೇಂದ್ರಗಳಾಗಿ ಕಾರ್ಯಾಚರಿಸಲಿರುವ ನಮ್ಮ ಕುಳೂರು ಶಾಲೆಯನ್ನು ಚುನಾವಣೆಯ ಕಾರ್ಯ ಚಟುವಟಿಕೆಗಳಿಗೆ ಸಜ್ಜುಗೊಳಿಸಲಾಯಿತು.  ಆ ಪ್ರಯುಕ್ತ ಶಾಲಾ ಒಳಾಂಗಣ ಮತ್ತು ಹೊರಾಂಗಣ, ಪೀಠೋಪಕರಣಗಳ ಸ್ವಚ್ಛತಾ ಕಾರ್ಯವು ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರು ಮತ್ತು ಶಾಲಾ ಸಿಬ್ಬಂದಿ ವರ್ಗದವರಿಂದ ನಡೆಯಿತು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ, ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ರಾಜಲಕ್ಷ್ಮಿ ದೇರಂಬಳ ಗುತ್ತು, ಉಪಾಧ್ಯಕ್ಷೆ ಸುಪ್ರೀತ ಪಾದೆ ಹೊಸಮನೆ, ಪ್ರೇಮ ಜಿ ಶೆಟ್ಟಿ ಹಾಗೂ ಶಾಲಾ ಶಿಕ್ಷಕ ವೃಂದ ಈ ಸ್ವಚ್ಛತಾ ಕಾರ್ಯದಲ್ಲಿ ಕೈ ಜೋಡಿಸಿದರು. ಎಲ್ಲರಿಗೂ ಶಾಲಾ ಪರವಾಗಿ ಧನ್ಯವಾದಗಳನ್ನು ಅರ್ಪಿಸಲಾಯಿತು.







Sunday 29 November 2020

ಕುಳೂರು ಶಾಲೆಯಲ್ಲಿ ಸೇವಾಚರಣೆ

         ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಶ್ರಯದಲ್ಲಿ ಸೇವಾ ಸಾಂಘಿಕ್ ಯೋಜನೆಯಡಿಯಲ್ಲಿ ಕುಳೂರು ಘಟಕದ ವತಿಯಿಂದ ಶಾಲಾ ಪರಿಸರ ಶುಚೀಕರಣ ನಡೆಯಿತು. ಕೊರೋನ ಬಾಧೆಯಿಂದ ಮಕ್ಕಳ ಓಡಾಟವಿಲ್ಲದೆ ಶಾಲೆಯ ಸುತ್ತಲೂ ಹುಲ್ಲು, ಪೊದರುಗಳು ಬೆಳೆದಿದ್ದು, ಇದರ ತೆರವು ಕಾರ್ಯದಲ್ಲಿ ಸಹಕರಿಸಿದ ಎಲ್ಲರಿಗೂ ಶಾಲಾ ಪರವಾಗಿ ಧನ್ಯವಾದಗಳನ್ನು ಅರ್ಪಿಸಲಾಯಿತು.








Sunday 22 November 2020

ಕುಟುಂಬಶ್ರೀ ಸದಸ್ಯೆಯರಿಂದ ಶ್ರಮದಾನ

       ಕೊರೋನ ಬಾಧೆಯಿಂದ ಮುಚ್ಚಲ್ಪಟ್ಟಿರುವ ಶಾಲೆಯು ಮಕ್ಕಳಿಲ್ಲದೆ ಬಣ ಬಣಗುಟ್ಟುತ್ತಿದೆ. ಶಾಲಾ ಪರಿಸರ ಜನ ಸಂಚಾರವಿಲ್ಲದೆ ಪೊದರು ಬೆಳೆದು ನಿಂತಿದೆ. ಇವುಗಳನ್ನು ಶ್ರಮದಾನದ ಮೂಲಕ ಇಂದು ಸ್ಥಳೀಯ ಕುಟುಂಬಶ್ರೀಯ ವಿವಿಧ ಘಟಕಗಳ ಸದಸ್ಯೆಯರು ಶುಚೀಕರಣ ಮಾಡುವ ಮೂಲಕ ಶಾಲಾ ಪರಿಸರ ಶುಚೀಕರಣದ ಶ್ರಮದಾನಕ್ಕೆ ಚಾಲನೆ ನೀಡಿದರು. ಇವರಿಗೆ ಶಾಲಾ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲಾಯಿತು.






Friday 16 October 2020

ಕ್ಲಾಸ್ ಪಿ. ಟಿ. ಎ ಸಭೆ

       ಶಾಲಾ ಮಕ್ಕಳಿಗೆ ಆನ್ಲೈನ್ ಕ್ಲಾಸುಗಳು ನಡೆಯುತ್ತಿದ್ದು ಮಕ್ಕಳ ಈ ಕಲಿಕೆಯ ಕುರಿತು ಪರಾಮರ್ಶೆ ನಡೆಸಲು ಕ್ಲಾಸ್ ಪಿ. ಟಿ. ಎ. ಸಭೆಯನ್ನು ಕರೆಯಲಾಯಿತು. ಈ ಸಭೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿ ಚಾರ್ಲ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮ ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ರಾಜಲಕ್ಷ್ಮಿ ದೇರಂಬಳ ಗುತ್ತು ಉಪಸ್ಥಿತರಿದ್ದರು. ಮಕ್ಕಳ ಆನ್ಲೈನ್ ಕ್ಲಾಸುಗಳ ಗುಣಾವಗುಣಗಳ ಕುರಿತು ಹೆತ್ತವರು ಅಭಿಪ್ರಾಯ ತಿಳಿಸಿದರು. ಅಧ್ಯಾಪಕರು ಮನೆ ಮನೆ ಭೇಟಿ ನೀಡಿದ್ದನ್ನು ಪ್ರಶಂಸಿಸಿ, ಇನ್ನು ಮುಂದೆಯೂ ಈ ಕಾರ್ಯಕ್ರಮವನ್ನು ಮುಂದುವರಿಸಲು ಮನವಿ ಮಾಡಿದರು. ಶಾಲಾ ಶಿಕ್ಷಕರು ಮನೆ ಭೇಟಿಯನ್ನು ಮುಂದೆಯೂ ಮುಂದುವರಿಸುವುದಾಗಿ ಭರವಸೆಯಿತ್ತರು. ಇದೇ ಸಂದರ್ಭದಲ್ಲಿ ಬಿ. ಆರ್. ಸಿ ವತಿಯಿಂದ ಲಭಿಸಿದ ಕಲಿಕಾ ವರ್ಕ್ ಶೀಟ್ ಮತ್ತು ಮಾಸ್ಕ್'ಗಳನ್ನು ವಿತರಿಸಲಾಯಿತು. ಶಾಲಾ ಶಿಕ್ಷಕಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕಿ ನಯನ ಎಂ ವಂದಿಸಿದರು.









Monday 5 October 2020

ಎ. ಇ. ಒ ರವರೊಂದಿಗೆ ವಿಶೇಷ ಆನ್ಲೈನ್ ಎಸ್. ಆರ್. ಜಿ ಸಭೆ

         ಆನ್ಲೈನ್ ಕ್ಲಾಸುಗಳ ಅವಲೋಕನದ ಕುರಿತಾಗಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀಯುತ ದಿನೇಶ್ ವಿ ಸರ್ ರವರೊಂದಿಗೆ ವಿಶೇಷ ಎಸ್. ಆರ್. ಜಿ ಆನ್ಲೈನ್ ಸಭೆಯನ್ನು ಗೂಗಲ್ ಮೀಟ್'ನಲ್ಲಿ ನಡೆಸಲಾಯಿತು. ವಿದ್ಯಾಧಿಕಾರಿಗಳು ಪ್ರತಿ ಕ್ಲಾಸಿನ ಮಕ್ಕಳ ಪುರೋಗತಿ ಹಾಗೂ ಆನ್ಲೈನ್ ಕ್ಲಾಸುಗಳ ಲಭ್ಯತೆಯ ಕುರಿತು ಮಾಹಿತಿಯನ್ನು ಆಯಾ ತರಗತಿ ಅಧ್ಯಾಪಕರಿಂದ ಪಡೆದುಕೊಂಡರು. ಮಕ್ಕಳ ಆನ್ಲೈನ್ ಕ್ಲಾಸುಗಳ ಗುಣಾವಗುಣಗಳು ಹಾಗೂ ಕುಂದುಕೊರತೆಗಳ ಕುರಿತು ವಿದ್ಯಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಯಿತು. ಅಧ್ಯಾಪಕರು ನಡೆಸಿದ ಮನೆ ಮನೆ ಭೇಟಿಯನ್ನು ಪ್ರಶಂಸಿದರು. ಮುಂದಿನ ಹಲವಾರು ಕಾರ್ಯ ಯೋಜನೆಗಳ ಕುರಿತು ಸಲಹೆಗಳನ್ನು ನೀಡಿದರು.



Friday 2 October 2020

ಗಾಂಧೀಜಿ, ಶಾಸ್ತ್ರೀಜಿ ಜಯಂತಿ ಆಚರಣೆ

     ನಮ್ಮ ಕುಳೂರು ಶಾಲಾ ಮಕ್ಕಳು ತಮ್ಮ ಮನೆಗಳಲ್ಲಿ ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಯವರ ಜನ್ಮ ದಿನಾಚರಣೆಯನ್ನು  ಸೇವನಾ ದಿನವಾಗಿ ವಿಭಿನ್ನ ರೀತಿಯಲ್ಲಿ ಆಚರಿಸಿದರು.


Thursday 1 October 2020

ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿಯ ಶುಭಾಶಯಗಳು

 


ಮನೆ ಮನೆ ಭೇಟಿ

      ಕೊರೋನದ ಈ ಕಷ್ಟ ಕಾಲದಲ್ಲಿ ಮಕ್ಕಳು ಅನಿವಾರ್ಯವಾಗಿ ಆನ್ಲೈನ್ ಕ್ಲಾಸುಗಳನ್ನು ಅವಲಂಬಿಸಬೇಕಾಯಿತು. ನಮ್ಮ ಕುಳೂರಿನ ಶಾಲಾ ಮಕ್ಕಳಿಗೆ ಈ ಆನ್ಲೈನ್ ಕ್ಲಾಸುಗಳು ಸರಿಯಾದ ಸಮಯದಲ್ಲಿ ಲಭ್ಯವಾಗುವಂತೆ ಮಾಡಲು ಪ್ರತೀ ತರಗತಿಯ ವಾಟ್ಸಾಪ್ ಗ್ರೂಪುಗಳನ್ನು ಮಾಡಿ ಅದರಲ್ಲಿ ಆನ್ಲೈನ್ ಕ್ಲಾಸುಗಳ ಯೂಟ್ಯೂಬ್ ಲಿಂಕ್'ಗಳನ್ನು ಹಾಕಲಾಗುತ್ತಿದೆ. ಜೊತೆಗೆ ಕೆಲವೊಂದು ಚಟುವಟಿಕೆಗಳನ್ನು, ವರ್ಕ್ ಶೀಟ್'ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಕೆಲವು ಮಕ್ಕಳು ತಾವು ಮಾಡಿದಂತಹ ಚಟುವಟಿಕೆಗಳನ್ನು ಅಧ್ಯಾಪಕರಿಗೆ ತೋರಿಸಲು ಬರೆದಂತಹ ಬರಹಗಳನ್ನು ಫೋಟೋ ತೆಗೆದು ತಮ್ಮ ಕ್ಲಾಸು ಅಧ್ಯಾಪಕರಿಗೆ ವಾಟ್ಸಾಪ್ ಮಾಡುತ್ತಿರುವರು.

        ಈ ಆನ್ಲೈನ್ ಕ್ಲಾಸುಗಳಲ್ಲಿ ನಮ್ಮ ಶಾಲಾ ಮಕ್ಕಳ ಪುರೋಗತಿ ಹಾಗೂ ಆಗುವಂತಹ ಅನುಕೂಲತೆ ಹಾಗೂ ಅನಾನುಕೂಲತೆಗಳನ್ನು  ತಿಳಿಯಲು ಮನೆ ಮನೆ ಭೇಟಿ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಆ ಪ್ರಯುಕ್ತ ಮೊದಲ ಹಂತವಾಗಿ ಈ ಸಪ್ಟೆಂಬರ್ ತಿಂಗಳ ಮೂರನೇ ವಾರದಲ್ಲಿ ಶಾಲೆಯ ಎಲ್ಲಾ ಮಕ್ಕಳ ಮನೆಗೆ ಭೇಟಿ ಮಾಡಿ, ಮಕ್ಕಳ ಕಲಿಕೆಯ ಆಗುಹೋಗುಗಳನ್ನು ತಿಳಿದು, ತಾವು ಮಾಡಿದ ಚಟುವಟಿಕೆಗಳ ಪರಿಶೀಲನೆ ಮಾಡುವುದರೊಂದಿಗೆ ಆನ್ಲೈನ್ ಕ್ಲಾಸುಗಳಿಂದಾಗುವ ಗುಣಾವಗುಣಗಳ ಕುರಿತು ಕಂಡುಕೊಳ್ಳಲಾಯಿತು. ಮನೆ ಭೇಟಿಯು ಮಕ್ಕಳಲ್ಲಿ ಬಹಳ ಉತ್ಸಾಹ ತಂದಿರುವುದು ಮಾತ್ರವಲ್ಲದೆ ಹೆತ್ತವರಿಗೂ ಸಂತಸ ತಂದಿತ್ತು. ಯಾವುದೇ ಸಂಕೋಚವಿಲ್ಲದೆ ಮಕ್ಕಳು ಹಾಗೂ ಹೆತ್ತವರು ಅಧ್ಯಾಪಕರನ್ನು ಸ್ವಾಗತಿಸಿದಲ್ಲದೇ ಸಂಪೂರ್ಣ ಸಹಕಾರವನ್ನೂ ನೀಡಿದರು. ವಿವಿಧ ವಿಷಯಗಳಿಗೆ ಸಂಬಂಧಿಸಿ ಮಕ್ಕಳ ಓದುವಿಕೆ ಹಾಗೂ ಬರವಣಿಗೆಯ ಬಗ್ಗೆ ತಿಳಿಯಲು ಮನೆಯಲ್ಲೇ ಕೆಲವೊಂದು ಚಟುವಟಿಕೆಗಳನ್ನು ನೀಡಿ ಪರೀಕ್ಷಿಸಲಾಯಿತು. ಮುಂದಿನ ದಿನಗಳಲ್ಲಿ ಈ ಆನ್ಲೈನ್ ಕ್ಲಾಸುಗಳ ಬಗ್ಗೆ ಇನ್ನಷ್ಟು ಹೆಚ್ಚಿನ ಆಸಕ್ತಿ ಮೂಡಲು ಸಹಕಾರಿಯಾಯಿತು. ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಒಳಗೊಂಡ ವರ್ಕ್ ಶೀಟ್'ಗಳನ್ನೂ ವಿತರಿಸಲಾಯಿತು.











Friday 25 September 2020

ಉಪಜಿಲ್ಲಾ ವಿದ್ಯಾಧಿಕಾರಿಗಳ ಭೇಟಿ

        ಇಂದು ನಮ್ಮ ಕುಳೂರು ಶಾಲೆಗೆ ಮಂಜೇಶ್ವರ ಉಪ ಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ ರವರು ಭೇಟಿಯಿತ್ತರು. ಪ್ರಸ್ತುತ ಶಾಲಾ ಮಕ್ಕಳಿಗೆ ನಡೆಯುತ್ತಿರುವ ಆನ್ಲೈನ್ ಕ್ಲಾಸುಗಳು ಕುರಿತು ಚರ್ಚೆ ನಡೆಸಿದರು. ಶಾಲಾ ಶಿಕ್ಷಕ ವೃಂದ ಮಕ್ಕಳ ಮನೆ ಮನೆಗೆ ತೆರಳಿ ಆನ್ಲೈನ್ ಕ್ಲಾಸುಗಳ ಮತ್ತು ಮಕ್ಕಳ ಕಲಿಕಾ ಚಟುವಟಿಕೆಗಳ ಕುರಿತು ಪರಿಶೀಲನೆ ನಡೆಸುವುದರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.








Saturday 5 September 2020

ಆನ್ಲೈನ್ ತರಗತಿಯಲ್ಲಿ ಮಿಂಚಿದ ಕುಳೂರು ಶಾಲೆಯ ಶಿಕ್ಷಕ-ಶಿಕ್ಷಕರಿಯರು

'ಗುರು ಬ್ರಹ್ಮ, ಗುರುರ್ವಿಷ್ಣು,

ಗುರು ದೇವೋ ಮಹೇಶ್ವರಃ,

ಗುರು ಸಾಕ್ಷಾತ್ ಪರಬ್ರಹ್ಮ

ತಸ್ಮೈ ಶ್ರೀ ಗುರವೇ ನಮಃ'.

             ಸಮಾಜದಲ್ಲಿ ಗುರುವಿಗೆ ಇರುವ ಸ್ಥಾನಮಾನವನ್ನು ಈ ಸಾಲು ನಮಗೆಲ್ಲರಿಗೂ ತಿಳಿಸಿ ಕೊಡುತ್ತದೆ. ಮಗುವಿಗೆ ತಾಯಿಯೇ ಮೊದಲ ಗುರುವಾದರೆ, ಆನಂತರದ ಮಗುವಿನ ಪರಿಪೂರ್ಣ ಅಭಿವೃದ್ಧಿಗೆ ಗುರು ನಾಂದಿ ಹಾಡುವನು. ಜಾತಿ, ಮತ, ಧರ್ಮಗಳ ಭೇದವಿಲ್ಲದ ದೇಗುಲವೊಂದಿದ್ದರೆ ಅದು ಶಾಲೆಯಲ್ಲದೆ ಮತ್ತೊಂದಿಲ್ಲ. ಜೊತೆಗೆ ಸಮಾಜದಲ್ಲಿ ಗುರುವಿಗೆ ಸಿಗುವ ಗೌರವಾದರಗಳು ಇನ್ಯಾವುದೇ ಹುದ್ದೆಗೆ ಸಿಗುವುದು ಬಹಳ ಅಪರೂಪವೆಂದೇ ಹೇಳಬಹುದು.

            ನಮ್ಮ ದೇಶದ ಮೊದಲ ಉಪರಾಷ್ಟ್ರಪತಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನಾಚರಣೆಯಾದ ಸಪ್ಟೆಂಬರ್ 5 ರಂದು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಾಗಿ ದೇಶದಾದ್ಯಂತ ಆಚರಿಸಲಾಗುತ್ತಿದೆ. ಆದರ್ಶ ಶಿಕ್ಷಕರಾಗಿ ಗುರುತಿಸಿಕೊಂಡಿದ್ದ ಡಾ. ಎಸ್. ರಾಧಾಕೃಷ್ಣನ್ ರವರಿಗೆ ಕೊಟ್ಟ ಗೌರವವಿದು. ಅವರ ಜೀವನಚರಿತ್ರೆ ಎಲ್ಲರಿಗೂ ಮಾದರಿಯಾಗಿರುವುದಂತು ಸತ್ಯ.

            ಸಮಾಜದಲ್ಲಿ ಗುರುವಿನ ಸ್ಥಾನದಲ್ಲಿದ್ದುಕೊಂಡು ಆದರ್ಶ ಶಿಕ್ಷಕರಾಗಿ ಗುರುತಿಸಿಕೊಂಡವರು ಅದೆಷ್ಟೋ ಮಂದಿ ಇರುವರು. ಇವರಲ್ಲಿ ಕೆಲವರನ್ನು ಸಮಾಜ ಗುರುತಿಸಿಕೊಂಡಿದ್ದರೆ, ಇನ್ನು ಅನೇಕರು ತೆರೆ ಮರೆಯಲ್ಲಿ ಆದರ್ಶ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿರುವರು. 

            ಪ್ರತಿ ವರ್ಷ ಈ ದಿನವನ್ನು ಶಾಲೆಯಲ್ಲಿ ಔಚಿತ್ಯ ಪೂರ್ಣವಾಗಿ ಆಚರಿಸಿದ್ದು, ಈ ಸಲ ಕೊರೋನ ಕಾರಣದಿಂದ ಶಾಲೆಯಲ್ಲಿ ಯಾವುದೇ ಆಚರಣೆಯನ್ನು ಸರಿಯಾಗಿ ಆಚರಿಸಲಾಗಲಿಲ್ಲ. ಕೊರೋನ ನಿಯಂತ್ರಣಕ್ಕೆ ಸರಕಾರದ ನಿಯಮಗಳನ್ನು ಪಾಲಿಸಬೇಕಾದುದು ನಮ್ಮ ಕರ್ತವ್ಯವೂ ಹೌದು.

           ಕೊರೋನ ಮಹಾಮಾರಿಯಿಂದಾಗಿ ಈ ಶೈಕ್ಷಣಿಕ ವರ್ಷದ ಶಿಕ್ಷಣವನ್ನು ಮಕ್ಕಳು ಕೇವಲ ಆನ್ಲೈನ್ ಕ್ಲಾಸುಗಳಿಂದಲೇ ಪಡೆಯುವಂತಾಗಿದೆ. ಈ ನಿಟ್ಟಿನಲ್ಲಿ ಕೇರಳ ಸರಕಾರ ಮಾಡಿದ ಆನ್ಲೈನ್ ಕ್ಲಾಸುಗಳ ವ್ಯವಸ್ಥೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ತಡೆ ಬರದಂತೆ ಕಾಪಾಡುವಲ್ಲಿ ಯಶಸ್ಸನ್ನು ಪಡೆದಿದೆ. ಇದಕ್ಕಾಗಿ ನಮ್ಮ ಹೆಮ್ಮೆಯ ಅಧ್ಯಾಪಕ ಬಂಧುಗಳ ಕೊಡುಗೆ ಅಪಾರ. ಆನ್ಲೈನ್ ಕ್ಲಾಸುಗಳನ್ನು ಮಾಡಲು ಮುಂದೆ ಬಂದ ಅಧ್ಯಾಪಕ-ಅಧ್ಯಾಪಿಕೆಯರು ಮಾಡಿದಂತಹ ತರಗತಿಗಳ ವೀಡಿಯೋ, ಅದನ್ನು ಸೂಕ್ತ ರೀತಿಯಲ್ಲಿ ಎಡಿಟಿಂಗ್ ಮಾಡಿದ ಅಧ್ಯಾಪಕರು ಎಲ್ಲವೂ ಎಲ್ಲರನ್ನೂ ಆಕರ್ಷಿಸಿದ್ದು ಮಕ್ಕಳನ್ನು ಸೆಳೆಯುವಲ್ಲಿ ಸಾಧ್ಯವಾಗಿದೆ.

          ಈ ಆನ್ಲೈನ್ ಕ್ಲಾಸುಗಳನ್ನು ತೆಗೆಯುವವರಲ್ಲಿ ನಮ್ಮ ಕುಳೂರು ಶಾಲೆಯ ಮೂವರು ಅಧ್ಯಾಪಕರು ಇರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ, ಅಧ್ಯಾಪಿಕೆಯರಾದ ಸೌಮ್ಯ ಪಿ ಹಾಗೂ ನಯನ ಎಂ ಆನ್ಲೈನ್ ಕ್ಲಾಸುಗಳನ್ನು ನಡೆಸಿಕೊಟ್ಟು ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದು, ಶಾಲೆಗೆ ಹೆಮ್ಮೆಯನ್ನು ತಂದುಕೊಟ್ಟಿದೆ. ಮಕ್ಕಳನ್ನು ಆಕರ್ಷಿಸುವ ರೀತಿಯಲ್ಲಿ ಇವರ ತರಗತಿಗಳು ಮೂಡಿ ಬಂದಿದ್ದು ಇದಕ್ಕಾಗಿ ಮಾಡಿದಂತಹ ಶ್ರಮ, ಕಾರ್ಯದಕ್ಷತೆ, ಉತ್ಸಾಹ ಹಾಗೂ ಆಸಕ್ತಿ ಎಲ್ಲವೂ ಆಕರ್ಷಣೆಗೆ ಕಾರಣವಾಗಿದೆ. ಇಂದಿನ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಇವರಿಗೆ ಪ್ರತ್ಯೇಕ ಅಭಿನಂದನೆಗಳೊಂದಿಗೆ ಹೃದಯಾಂತರಾಳದ ಧನ್ಯವಾದಗಳು ಎಲ್ಲರ ಪರವಾಗಿ ಅರ್ಪಿಸುತ್ತಿದ್ದೇನೆ.

 (ನನಗೂ ಆನ್ಲೈನ್ ಕ್ಲಾಸುಗಳ ತರಗತಿ ಮಾಡಲು ಮತ್ತು ವೀಡಿಯೋ ಎಡಿಟಿಂಗ್ ಮಾಡಲು ಅವಕಾಶ ಸಿಕ್ಕಿದ್ದು, ನನ್ನ ವೈಯಕ್ತಿಕ ಕಾರಣಗಳಿಂದ ಹೋಗಲು ಸಾಧ್ಯವಾಗದಿರುವುದು ನನ್ನ ದುರಾದೃಷ್ಟವೆಂದೇ ಹೇಳಬಹುದು. ಇಲ್ಲದಿದ್ದರೆ ಶಾಲೆಯ ಎಲ್ಲಾ ಅಧ್ಯಾಪಕರು ಈ ಆನ್ಲೈನ್ ಕ್ಲಾಸು ನಡೆಸುವ ಕಾರ್ಯಾಗಾರದಲ್ಲಿ ಭಾಗವಹಿಸುವಂತಾಗುತ್ತಿತ್ತು.)

                                                    ✍ ಜೆ. ಪಿ ಪಾಲೆಂಗ್ರಿ





Wednesday 2 September 2020

ಶಾಲೆಯಲ್ಲಿ ಶ್ರಮದಾನ

          ಇಂದು ನಮ್ಮ ಕುಳೂರು ಶಾಲೆಯಲ್ಲಿ ಕೃಷಿ ಚಟುವಟಿಕೆಗೆ ಶ್ರಮದಾನ ಮಾಡಲಾಯಿತು. ಬೆಂಡೆ ಸಸಿಗಳನ್ನು ನಮ್ಮ ಶಾಲಾ ಹಳೆ ವಿದ್ಯಾರ್ಥಿ ಸಂಘದ ಸದಸ್ಯ ವಸಂತ ಪೂಜಾರಿ ಕುಳೂರು ಒದಗಿಸಿ ಕೊಟ್ಟರು. ಸೊಪ್ಪು, ಸಾವಯವ ಗೊಬ್ಬರದ ಬಳಕೆ ಮಾಡಲಾಯಿತು. ಈ ಶ್ರಮದಾನದಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ, ಹಳೆ ವಿದ್ಯಾರ್ಥಿ ಸಂಘದ ಸಕ್ರಿಯ ಸದಸ್ಯ ಹರಿರಾಮ ಕುಳೂರು, ಯತೀಶ್ (ನಂದು) ಕುಳೂರು, ಸೀತಾರಾಮ ಕುಳೂರು ಕೈ ಜೋಡಿಸಿದರು. ಎಲ್ಲರಿಗೂ ಶಾಲಾ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನುಸಲ್ಲಿಸುತ್ತಿದ್ದೇವೆ.