FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Monday 22 November 2021

ಶಾಲಾ ಚುನಾವಣೆ 2021-22

        ಮಕ್ಕಳಲ್ಲಿ ಪ್ರಜಭಭುತ್ವದ ಪರಿಕಲ್ಪನೆಯನ್ನು ಮೂಡಿಸಲು ನಮ್ಮ ಕುಳೂರು ಶಾಲೆಯಲ್ಲಿ ಪ್ರತೀ ವರ್ಷ ಶಾಲಾ ಚುನಾವಣೆ ನಡೆಸುತ್ತಿದ್ದು, ಈ ವರ್ಷವೂ ಮಕ್ಕಳ ಕುತೂಹಲ, ಹುಮ್ಮಸ್ಸನ್ನು ಈ ಚುನಾವಣೆ ಹೆಚ್ಚು ಮಾಡಿತ್ತು.

        ಕಳೆದ ಶುಕ್ರವಾರದಂದು ನಾಮಪತ್ರ ಸಲ್ಲಿಕೆ ಆದ ಬಳಿಕ ಇಂದು ಶಾಲಾ ನಾಯಕನ ಆಯ್ಕೆಗೆ ಚುನಾವಣೆಯು ನಡೆದಿದ್ದು, ಮಕ್ಕಳೆಲ್ಲರೂ ಈ ಚುನಾವಣೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

         ಸರದಿ ಸಾಲಿನಲ್ಲಿ ಬಂದ ಮತದಾರ ಮಕ್ಕಳು, ಕೋವಿಡ್ - 19 ರ ನಿಯಂತ್ರಣಾ ಕ್ರಮಗಳನ್ನು ಪಾಲಿಸಿಕೊಂಡು, ಯಾವುದೇ ಗೊಂದಲವಿಲ್ಲದೆ ಸಭ್ಯತೆಯಿಂದ ಗುರುತಿನ ಚೀಟಿ ಹಿಡಿದುಕೊಂಡು ಮತ ಹಾಕುವ ಮೂಲಕ ಮಾದರಿಯಾದರು.

         ಪ್ರಜಾಪ್ರಭುತ್ವ ಮಾದರಿಯಲ್ಲಿ ಗೌಪ್ಯ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಕ್ಕಳು ತಮ್ಮ ಕೈ ಬೆರಳಿಗೆ ಮತದಾನ ಗುರುತನ್ನು ಹಾಕಿಸಿಕೊಂಡು, ಗೌಪ್ಯ ಮತದಾನದ ಮೂಲಕ ಮತ ಚಲಾಯಿಸಿದರು. ಮತದಾನದ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳಾದ ಅಂಕಿತ್, ಹರ್ಷಿತ ಕೆ, ಶ್ರೀನಿಧಿ ವಿ ಆರ್ ಪೋಲ್ಲಿಂಗ್ ಆಫೀಸರುಗಳಾಗಿ, ರಜ್'ತೇಶ್  ಡಿ. ಕೆ ಹಾಗೂ ಆಕಾಶ್ ಶೆಟ್ಟಿ ಪೊಲೀಸ್ ಅಧಿಕಾರಿಗಳಾಗಿ ಸಹಕರಿಸಿದರು.

     ನಂತರ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತದಾನ ಎಣಿಕಾ ಪ್ರಕ್ರಿಯೆ ನಡೆಯಿತು. ಎಲ್ಲರ ಕಾತರ, ಕುತೂಹಲಕ್ಕೆ ಕಾರಣವಾದ ವಿಜೇತ ಅಭ್ಯರ್ಥಿಯ ಘೋಷಣೆಯನ್ನು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಾಲಾ ಮುಖ್ಯೋಪಾಧ್ಯಾಯರು ಮಾಡಿದರು.

       ಶಾಲಾ ಮುಖ್ಯೋಪಾಧ್ಯಾಯರು ವಿಜೇತ ಅಭ್ಯರ್ಥಿಗಳಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು. ಶಾಲಾ ನಾಯಕನಾಗಿ ಸಾನ್ವಿತ್ ಶೆಟ್ಟಿ, ಉಪನಾಯಕಿಯಾಗಿ ಚಿನ್ಮಯಿ ಜೆ ಆಳ್ವ ಆಯ್ಕೆಯಾದರು. ಆರೋಗ್ಯ ಮಂತ್ರಿಯಾಗಿ ಶ್ರೇಯ ಕೆ ಸಿ ಆಯ್ಕೆಯಾದಳು.

        ಶಾಲಾ ಮುಖ್ಯೋಪಾಧ್ಯಾಯರು ಅಭ್ಯರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಇದೇ ಸಂದರ್ಭದಲ್ಲಿ ವಿಜೇತ ಅಭ್ಯರ್ಥಿಗಳನ್ನು ಮೆರವಣಿಗೆಯ ಮೂಲಕ ಮಕ್ಕಳು ಅಭಿನಂದನೆ ಸಲ್ಲಿಸಿದರು.
























ಮಧ್ಯಾಹ್ನದೂಟಕ್ಕೆ ತೆಂಗಿನಕಾಯಿ ಕೊಡುಗೆ

        ತಮ್ಮ ಮಗಳಾದ ಶಾಲಾ ವಿದ್ಯಾರ್ಥಿನಿ ಶ್ರೇಯ ಕೆ.ಸಿ ಇವಳ ಪರವಾಗಿ ಶಾಲೆಯ ಮಧ್ಯಾಹ್ನದೂಟಕ್ಕೆ ತೆಂಗಿನಕಾಯಿಗಳನ್ನು ಕೊಟ್ಟು ಸಹಕರಿಸಿದ ಶಾಲಾ ರಕ್ಷಕರಾದ ಚಂದ್ರಹಾಸ ಸುಪ್ರೀತಾ, ಕುಳೂರು ಹೊಸಮನೆ ಇವರಿಗೆ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ.



Friday 19 November 2021

ಶಾಲಾ ಚುನಾವಣೆಗೆ ನಾಮಪತ್ರ ಸಲ್ಲಿಕೆ

        ಮಕ್ಕಳಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೂಡಿಸಲು ಪ್ರತೀ ವರ್ಷ ನಡೆಸುವಂತೆ ಈ ವರ್ಷವೂ ಶಾಲಾ ಚುನಾವಣೆ ನಡೆಸಲು ನಮ್ಮ ಕುಳೂರು ಶಾಲೆಯಲ್ಲಿ ಸಿದ್ಧತೆ ನಡೆಯುತ್ತಿದೆ.

         ಈ ನಿಟ್ಟಿನಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಇಂದು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುವ ಶಾಲಾ ಮುಖ್ಯೋಪಾಧ್ಯಾಯರಿಗೆ ನಾಮ ಪತ್ರ ಸಲ್ಲಿಸಿದರು.

         ಕೆಲವು ಮಾನದಂಡ ಹಾಗೂ ಅರ್ಹತೆಯನ್ನು ಇಟ್ಟುಕೊಂಡು ಅಭ್ಯರ್ಥಿಗಳು ತಮ್ಮನ್ನು ತಾವೇ ಆಯ್ಕೆ ಮಾಡಿಕೊಂಡಿದ್ದರು. ನಾಮ ಪತ್ರವನ್ನು ತಮ್ಮನ್ನು ಅನುಮೋದಿಸಿದ ಜೊತೆಗಾರರೊಂದಿಗೆ ಇಂದು ಸಲ್ಲಿಸಿದರು. ಬಳಿಕ ಪ್ರತೀ ಕ್ಲಾಸುಗಳಿಗೆ ತೆರಳಿ ಮತ ಯಾಚನೆ ಮಾಡಿದರು.

      ನಾಳೆ ನಾಮಪತ್ರ ಹಿಂಪಡೆಯುವ ಕೊನೆಯ ದಿನವಾಗಿದೆ. ಬರುವ ಸೋಮವಾರದಂದು ಶಾಲಾ ಚುನಾವಣೆ ನಡೆಯಲಿದೆ. ಕೋವಿಡ್-19 ನಿಯಂತ್ರಣಾ ಮಾನ ದಂಡಗಳನ್ನು ಪಾಲಿಸಿಕೊಂಡು ಈ ಶಾಲಾ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಮುಖ್ಯೋಪಾಧ್ಯಾಯರು ತಿಳಿಸಿದರು.





Tuesday 16 November 2021

ಶಾಲಾ ಮಕ್ಕಳಿಗೆ ಹಣ್ಣು, ಸಿಹಿ ತಿಂಡಿ ವಿತರಣೆ

        ಇಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮ ಪಿ ರವರು ಶಾಲಾ ಮಕ್ಕಳಿಗೆ ಕಿತ್ತಳೆ ಹಣ್ಣು ನೀಡುವ ಮೂಲಕ ತಮ್ಮ ಹುಟ್ಟಿದ ಹಬ್ಬವನ್ನು ಮಕ್ಕಳೊಂದಿಗೆ ಆಚರಿಸಿದರು.

        ಮೂರನೇ ತರಗತಿಯ ಚಿರಾಗ್ ತನ್ನ ಹುಟ್ಟಿದ ಹಬ್ಬವನ್ನು ತನ್ನ ಸಹಪಾಠಿಗಳಿಗೆ ಸಿಹಿ ತಿಂಡಿ ನೀಡುವ ಮೂಲಕ ಆಚರಿಸಿದನು.




Monday 15 November 2021

ಮದ್ಯಾಹ್ನದೂಟಕ್ಕೆ ತೆಂಗಿನಕಾಯಿ ಕೊಡುಗೆ

        ಶಾಲೆಯ ಮಧ್ಯಾಹ್ನದೂಟಕ್ಕೆ ತೆಂಗಿನಕಾಯಿಗಳನ್ನು ಕೊಡುಗೆಯಾಗಿ ಎಲಿಯಾಣದ ಸುಧಾಕರ ಶೆಟ್ಟಿ ಹಾಗೂ ಅಶ್ವಿನಿ ಯಂ ರವರು ತಮ್ಮ ಮಗಳು, ಶಾಲಾ ವಿದ್ಯಾರ್ಥಿನಿ ಸಾನ್ವಿ ಶೆಟ್ಟಿ ಪರವಾಗಿ ನೀಡಿರುವರು. ಅವರಿಗೆ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ.



Sunday 14 November 2021

ಸಂಭ್ರಮದ ಮಕ್ಕಳ ದಿನಾಚರಣೆ

           ದೇಶವೇ ಕೊರೋನ ಕಾರಣದಿಂದ ತತ್ತರಿಸಿ, ಹತ್ತು ಹಲವು ಕಾರ್ಯಕ್ರಮಗಳು ಸ್ಥಗಿತವಾಗಿ ಸಂಭ್ರಮದ ಕಳೆ ಇಲ್ಲದಂತಾಗಿದೆ. ಕಳೆದ ಒಂದೂವರೆ ವರ್ಷದಿಂದ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲದೆ ಹಬ್ಬದ ವಾತಾವರಣವನ್ನು ಮರೆ ಮಾಚಿರುವ ಶಾಲೆಯು ಮತ್ತೆ ಮಕ್ಕಳಲ್ಲಿ ಸಂಭ್ರಮವನ್ನು ತಂದು ಕೊಡುವಲ್ಲಿ ಇದೀಗ ಮುನ್ನಡೆಯುತ್ತಿದೆ.

          ಮಕ್ಕಳು ಮೊದಲಿನಂತೆ ಸಂಭ್ರಮದಿಂದ ಆಚರಣೆಗಳನ್ನು ಆಚರಿಸುವಂತಾಗಬೇಕು ಎನ್ನುವ ಕಾರಣಕ್ಕೆ ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರುರವರ ಜನ್ಮ ದಿನಾಚರಣೆಯನ್ನು ಮಕ್ಕಳ ದಿನಾಚರಣೆಯಾಗಿ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಜೊತೆಗೆ ಶಾಲೆಯಲ್ಲಿ ಮಕ್ಕಳ ಸುಪ್ತ ಪ್ರತಿಭೆಯನ್ನು ಪ್ರದರ್ಶಿಸಲು ಇರುವ ಬಾಲ ಸಭೆಯ ಉದ್ಘಾಟನೆಯೂ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮೀಂಜ ಗ್ರಾಮ ಪಂಚಾಯತಿನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಸ್ವತಿ ಕೆ ನೆರವೇರಿಸಿದರು. ಅಧ್ಯಕ್ಷತೆಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಎಲಿಯಾಣರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಾರ್ಡ್ ಸದಸ್ಯರಾದ ಜನಾರ್ದನ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಂಚಿಲ, ಶಾಲಾಭಿವದ್ಧಿ ಸಮಿತಿ ಸದಸ್ಯರಾದ ನಾರಾಯಣ ನೈಕ್ ನಡುಹಿತ್ಲು ಆಗಮಿಸಿದ್ದರು. ಮಾತೆಯರ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಪ್ರಫುಲ್ಲ ವೈ ಶೆಟ್ಟಿ ಪೊಯ್ಯೆಲ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಶಾಲಾ ಮಕ್ಕಳಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ ರವರು ಪ್ರಾಸ್ತಾವಿಕ ಮಾತನಾಡಿದರು. ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಜಯರಾಜ್ ಶೆಟ್ಟಿ ಚಾರ್ಲ, ಮೀಯಪದವು ಪ್ರೌಢ ಶಾಲೆಯ ಶಿಕ್ಷಕ ಹರೀಶ್ ನಾಯಕ್ ಮೊದಲಾದವರು ಶುಭ ಹಾರೈಸಿದರು. ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಶಿಕ್ಷಕಿ ನಯನ ಎಂ ವಂದಿಸಿದರು. ಶಿಕ್ಷಕಿ ಸೌಮ್ಯ ಪಿ ಕಾರ್ಯಕ್ರಮ ನಿರೂಪಿಸಿದರು. ಶಾಲೆಗೆ ಫೋಕಸ್ ಲೈಟ್ ಒದಗಿಸಿದ ಯೋಗೀಶ್ ಶೆಟ್ಟಿ ಪೊಯ್ಯೆಲ್, ಬಹುಮಾನವನ್ನು ಪ್ರಾಯೋಜಿಸಿದ ಹಳೆ ವಿದ್ಯಾರ್ಥಿ ಸಂಘ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲು ಶಾಲಾ ಶಿಕ್ಷಕರೊಂದಿಗೆ ಕೈ ಜೋಡಿಸಿದ ಜಯರಾಜ್ ಶೆಟ್ಟಿ ಚಾರ್ಲರವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

         ಬಳಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

         ಮಧ್ಯಾಹ್ನ ನಂತರ ಮೀಂಜ ಪಂಚಾಯತಿನ ಕುಳೂರು ಕುಟುಂಬಶ್ರೀ ಘಟಕ ಹಾಗೂ ಫ್ರೆಂಡ್ಸ್ ಕುಳೂರು ಲೈಬ್ರೆರಿ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಹಲವು ಸ್ಪರ್ಧೆಗಳು ನಡೆದವು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನೂ ವಿತರಿಸಲಾಯಿತು. ಸಿ.ಡಿ.ಎಸ್ ಸದಸ್ಯೆಯರಾದ ಸುಚಿತ್ರ, ಚಂದ್ರಾವತಿ ವಿ. ಪಿ, ಕುಶಲಾಕ್ಷಿ ಎಲಿಯಾಣ ಮೊದಲಾದವರು ನೇತೃತ್ವ ವಹಿಸಿದ್ದರು.