FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Thursday 28 October 2021

ಶಾಲಾ ಮಕ್ಕಳ ಸ್ವಾಗತಕ್ಕೆ ಸಜ್ಜು : ಶಾಲಾ ಶುಚೀಕರಣ

           ನವೆಂಬರ್ ಒಂದರಿಂದ ಶಾಲಾರಂಭವಾಗುವ ಹಿನ್ನೆಲೆಯಲ್ಲಿ ಶಾಲೆಯನ್ನು ಸಜ್ಜುಗೊಳಿಸುವ ಸಲುವಾಗಿ ಶಾಲಾ ಕೊಠಡಿಗಳು ಹಾಗೂ ಪೀಠೋಪಕರಣಗಳನ್ನು ಶುಚಿಗೊಳಿಸುವ ಕಾರ್ಯ ಇಂದು ಶಾಲಾ ರಕ್ಷಕ-ಶಿಕ್ಷಕ ಸಂಘದ ನೇತೃತ್ವದಲ್ಲಿ ನಡೆಯಿತು. ರಕ್ಷಕ ಶಿಕ್ಷಕ ಸಂಘದ ಸದಸ್ಯರು ಈ ಕಾರ್ಯದಲ್ಲಿ ಕೈ ಜೋಡಿಸಿ ಮಕ್ಕಳ ಬರುವಿಕೆಗೆ ಶಾಲೆಯನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲಾಯಿತು.

           ಇದೇ ಸಂದರ್ಭದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸತೀಶ್ ಎಲಿಯಾಣರವರ ನೇತೃತ್ವದಲ್ಲಿ ಕ್ರಿಮನಾಶಕ ಸಿಂಪಡಣೆ ಮಾಡಲಾಯಿತು. ಈ ಕಾರ್ಯದಲ್ಲಿ ಶಾಲಾ ಹಳೆ ವಿದ್ಯಾರ್ಥಿಗಳಾದ ಹರಿಪ್ರಸಾದ್ ಎಲಿಯಾಣ ಹಾಗೂ ರಿತೇಶ್ ಕುಳೂರು ಸಹಕರಿಸಿದರು. ಶಾಲಾ ಪರವಾಗಿ ಇವರಿಗೆ ಅಭಿನಂದನೆ ಸಲ್ಲಿಸಲಾಯಿತು.










ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾಸಭೆ, ರಕ್ಷಕರಿಗೆ ತರಬೇತಿ

         ಕೊರೋನ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಮಕ್ಕಳ ಚಟುವಟಿಕೆಗಳಿಂದ ಕಳೆಗಟ್ಟಿದ್ದ ಶಾಲೆಯು ನವೆಂಬರ್ ಒಂದರಿಂದ ಪ್ರಾರಂಭವಾಗಲಿದ್ದು, ಈ ನಿಟ್ಟಿನಲ್ಲಿ ಶಾಲಾ ಮಕ್ಕಳ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯನ್ನು ಇಂದು ನಡೆಸಲಾಯಿತು.

          ಸಭೆಯ ಅಧ್ಯಕ್ಷತೆಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ರಾಜಲಕ್ಷ್ಮಿ ದೇರಂಬಳ ಗುತ್ತು, ಉಪಾಧ್ಯಕ್ಷೆ ಸುಪ್ರೀತಾ ಕುಳೂರು ಹೊಸಮನೆ, ಪ್ರೀ ಪ್ರೈಮರಿ ವಿಭಾಗದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸತೀಶ್ ಎಲಿಯಾಣ ಉಪಸ್ಥಿತರಿದ್ದರು.

          ಇದೇ ಸಂದರ್ಭದಲ್ಲಿ ರಕ್ಷಕರು ತರಬೇತಿ ಕಾರ್ಯಕ್ರಮವೂ ನಡೆಯಿತು. ಈ ತರಬೇತಿಯನ್ನು ಶಾಲಾ ಶಿಕ್ಷಕಿ ನಯನ ಎಂ ನಡೆಸಿಕೊಟ್ಟರು. 

         ಈ ಹಿಂದಿನ ಶಾಲಾ ಚಟುವಟಿಕೆಗಳ ಸಮಗ್ರ ವರದಿಯನ್ನು ಶಾಲಾ ಶಿಕ್ಷಕಿ ಸೌಮ್ಯ ಪಿ ವಾಚಿಸಿದರು. ಲೆಕ್ಕ ಪತ್ರ ಮಂಡನೆಯನ್ನು ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ಮಾಡಿದರು. ಬಳಿಕ 2021-22 ನೇ ಸಾಲಿನ ರಕ್ಷಕ ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಸತೀಶ್ ಎಲಿಯಾಣ, ಉಪಾಧ್ಯಕ್ಷರಾಗಿ ರಾಜಲಕ್ಷ್ಮಿ ದೇರಂಬಳ ಗುತ್ತು ಅವಿರೋಧವಾಗಿ ಆಯ್ಕೆಯಾದರು. ಜೊತೆಗೆ ಕಾರ್ಯಕಾರಿ ಸಮಿತಿಗೆ ಸದಸ್ಯರನ್ನೂ ಆಯ್ಕೆ ಮಾಡಲಾಯಿತು.

          ನೂತನ ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆಯಾಗಿ ಪ್ರಫುಲ್ಲ ಪೊಯ್ಯೆಲ್, ಉಪಾಧ್ಯಕ್ಷೆಯಾಗಿ ಪ್ರೇಮ ಜಿ ಶೆಟ್ಟಿ ಚಾರ್ಲ ಅವಿರೋಧವಾಗಿ ಆಯ್ಕೆಯಾದರು. ಜೊತೆಗೆ ಸದಸ್ಯರನ್ನೂ ಆಯ್ಕೆ ಮಾಡಲಾಯಿತು.

          ಕೊರೋನ ಕಾಲ ಘಟ್ಟದಲ್ಲಿ ಸರಕಾರದ ಆದೇಶದ ಮೇರೆಗೆ ಶಾಲಾ ಆರೋಗ್ಯ ಸಮಿತಿ ಹಾಗೂ ಮಧ್ಯಾಹ್ನದೂಟದ ಕಾರ್ಯಕ್ರಮಕ್ಕೆ ನೂತನ ಸಮಿತಿಯನ್ನೂ ಈ ಸಂದರ್ಭದಲ್ಲಿ ರಚಿಸಲಾಯಿತು.

           ಶಾಲಾ ಶಿಕ್ಷಕಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕಿ ಅಶ್ವಿನಿ ಎಂ ವಂದಿಸಿದರು. ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು.










          

Wednesday 27 October 2021

ಮಕ್ಕಳ ಆಟದ ಉದ್ಯಾನದ ಶಂಕು ಸ್ಥಾಪನೆ

           ನಮ್ಮ ಕುಳೂರು ಶಾಲೆಯ ಕನಸಿನ ಯೋಜನೆಯಾದ ಮಕ್ಕಳ ಆಟದ ಉದ್ಯಾನದ ಶಂಕು ಸ್ಥಾಪನೆ ಇಂದು ನಡೆಯಿತು.

           ನಮ್ಮ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲರವರು ಈ ಹಿಂದೆ ಮಕ್ಕಳ ಆಟದ ಉದ್ಯಾನವನ್ನು ನಿರ್ಮಿಸಬೇಕೆಂಬ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದರು. ಈ ಕುರಿತಾಗಿ ನಮ್ಮ ಶಾಲೆಗೆ ಪ್ರತೀ ಹಂತದಲ್ಲಿಯೂ ಸಹಕರಿಸುತ್ತಿರುವ ಶಾಲಾ ಹಳೆ ವಿದ್ಯಾರ್ಥಿಯಾದ, ಮುಂಬೈನ ಯುವ ಉದ್ಯಮಿ ಶ್ರೀ ಮೋಹನ್ ಶೆಟ್ಟಿ ಮಜ್ಜಾರ್ ರವರಲ್ಲಿ ಯೋಜನೆಯ ಕುರಿತು ಪ್ರಸ್ತಾಪಿಸಲಾಗಿತ್ತು. ಇದಕ್ಕೆ ಧನಾತ್ಮಕವಾಗಿ ಸ್ಪಂದಿಸುವುದರೊಂದಿಗೆ ಈ ಆಟದ ಉದ್ಯಾನದ ನಿರ್ಮಾಣದ ಪ್ರಾಯೋಜಕತ್ವವನ್ನು ವಹಿಸಿ, ಅದನ್ನು ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಘೋಷಿಸಿದ್ದು, ಶಾಲೆಯ ಕನಸಿನ ಯೋಜನೆಗೆ ರೆಕ್ಕೆ ಬಂದಂತಾಗಿತ್ತು. ಆದರೆ ಕೊರೋನ ಕಾರಣದಿಂದಾಗಿ ನಿರ್ಮಾಣ ಕಾರ್ಯ ತಡವಾದರೂ, ಇಂದು ಈ ಆಟದ ಉದ್ಯಾನಕ್ಕೆ ಶಂಕು ಸ್ಥಾಪನೆ ಮಾಡುವ ಮೂಲಕ ಮತ್ತೆ ಚಾಲನೆ ನೀಡಲಾಯಿತು.

         ಆಟದ ಉದ್ಯಾನದ ಶಂಕು ಸ್ಥಾಪನೆಯನ್ನು ಪ್ರಾಯೋಜಕರಾದ ಶ್ರೀ ಮೋಹನ್ ಶೆಟ್ಟಿ ಮಜ್ಜಾರ್ ರವರು ನೆರವೇರಿಸಿದರು. ಇವರ ಧರ್ಮಪತ್ನಿ ಶ್ರೀಮತಿ ಪೂಜಾ ಮೋಹನ್ ಹಾಗೂ ಮಕ್ಕಳು ಜೊತೆಗಿದ್ದರು. ಕಾರ್ಯಕ್ರಮದ ಅಧ್ಯಕ್ಷೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಂಚಿಲ, ಉಪಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಪೊಯ್ಯೆಲ್, ಪ್ರಧಾನ ಕಾರ್ಯದರ್ಶಿ ಶಶಿ ಕುಮಾರ್ ಕುಳೂರು, ಕೋಶಾಧಿಕಾರಿ ಚಿಕ್ಕಪ್ಪ ಶೆಟ್ಟಿ ಎಲಿಯಾಣ, ಹರಿರಾಮ ಕುಳೂರು, ಶಾಲಾ ಮಾತೃ ಸಂಘದ ಉಪಾಧ್ಯಕ್ಷೆ ಶ್ರೀಮತಿ ಸುಪ್ರೀತಾ ಕುಳೂರು ಹೊಸಮನೆ, ಪ್ರೀ ಪ್ರೈಮರಿ ವಿಭಾಗದ ಪಿ. ಟಿ. ಎ ಅಧ್ಯಕ್ಷ ಸತೀಶ್ ಎಲಿಯಾಣ, ಪಿ. ಟಿ. ಎ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ ಸ್ವಾಗತಿಸಿ, ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ವಂದಿಸಿದರು. ಆದಷ್ಟು ಬೇಗನೆ ಆಟದ ಉದ್ಯಾನದ ನಿರ್ಮಾಣ ಕಾರ್ಯ ಮಾಡುವ ತೀರ್ಮಾನ ಮಾಡಲಾಯಿತು.








Wednesday 20 October 2021

ಶಾಲಾ ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿ ಸಭೆ

         ಕಳೆದ ಒಂದೂವರೆ ವರ್ಷದಿಂದ ಮಕ್ಕಳ ಕಲರವ ಇಲ್ಲದ ಶಾಲೆಯು ಬರುವ ನವೆಂಬರ್ ತಿಂಗಳಲ್ಲಿ ಸರಕಾರದ ಸೂಚನೆಯ ಮೇರೆಗೆ ಮತ್ತೆ ಮಕ್ಕಳ ಚಟುವಟಿಕೆಗಳಿಗೆ ಸಜ್ಜಾಗುತ್ತಿದೆ. ಎಲ್ಲರೂ ಈ ದಿನಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದುದು ಎಲ್ಲರಿಗೂ ತಿಳಿದ ವಿಚಾರ. ಹಿಂದಿನ ಆ ಸಂಭ್ರಮದ ದಿನಗಳು ಮತ್ತೆ ಮರುಕಳಿಸಲಿ ಎಂಬುದು ಎಲ್ಲರ ಆಶಯ.

         ನವೆಂಬರ್ 1 ರಿಂದ ಮಕ್ಕಳಿಗೆ ಶಾಲೆಯಲ್ಲಿ ಚಟುವಟಿಕೆಗಳು ಮುಂದುವರಿಯಲಿದ್ದು ಆ ಸಲುವಾಗಿ ಇಂದು ಶಾಲಾ ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ ಸ್ವಾಗತಿಸಿ, ಎಸ್.ಆರ್.ಜಿ ಕನ್ವೀನರ್ ಶಿಕ್ಷಕಿ ನಯನ ಎಂ ವಂದಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯರು, ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಹಲವಾರು ವಿಚಾರಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.



Friday 15 October 2021

ಉಸಿರಿಗಾಗಿ ಹಸಿರು

          ಕುಳೂರು ಶಾಲಾ ಅಧ್ಯಾಪಕರಾದ ಜಯಪ್ರಶಾಂತ್ ಪಾಲೆಂಗ್ರಿರವರು ತಮ್ಮ ಸುಪುತ್ರ ಲಿಹಾನ್ ನ ಪ್ರಥಮ ಹುಟ್ಟು ಹಬ್ಬದ ಸಲುವಾಗಿ ಶಾಲಾ ಪರಿಸರದಲ್ಲಿ ತೆಂಗಿನ ಸಸಿ ಹಾಗೂ ಇತರ ಗಿಡಗಳನ್ನು ನೆಡುವ ಮೂಲಕ ಮಾದರಿಯಾದರು.

         ಕುಳೂರು ಶಾಲಾ ಅಧ್ಯಾಪಕ ಜಯಪ್ರಶಾಂತ್ ಹಾಗೂ ಅಶ್ವಿನಿ ದಂಪತಿ ತಮ್ಮ ಸುಪುತ್ರನಾದ ಲಿಹಾನ್ ನ ಹುಟ್ಟು ಹಬ್ಬದಂದು ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ ಗಿಡವನ್ನು ಕೊಡುಗೆಯಾಗಿ ನೀಡುವ ಮೂಲಕ ಗಮನ ಸೆಳೆದಿದ್ದರು.







Saturday 2 October 2021

ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ

         ಭಾರತದ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ಕುಳೂರು ಶಾಲೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು. ಆ ಪ್ರಯುಕ್ತ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದದೊಂದಿಗೆ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ, ಮಾತೆಯರ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ರಾಜಲಕ್ಷ್ಮಿ ದೇರಂಬಳ ಗುತ್ತು, ಸದಸ್ಯರಾದ ಪ್ರೇಮ ಜಿ ಶೆಟ್ಟಿ ಚಾರ್ಲ, ರೂಪ ಕುಳೂರು ಪಾದೆ ಮೊದಲಾದವರು ಕೈ ಜೋಡಿಸಿ ಶಾಲಾ ಪರಿಸರ ಸ್ವಚ್ಚ ಮಾಡುವುದರೊಂದಿಗೆ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸಹಕರಿಸಿದ ಎಲ್ಲರಿಗೂ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಲಾಯಿತು.