FLASH NEWS
Friday, 16 December 2022
Monday, 12 December 2022
ಶಾಲಾ ಹಳೆ ವಿದ್ಯಾರ್ಥಿಯಿಂದ ಮಕ್ಕಳಿಗೆ ವಿಶೇಷ ಭೋಜನ
ನಮ್ಮ ಕುಳೂರು ಶಾಲಾ ಹಳೆ ವಿದ್ಯಾರ್ಥಿಯಾದ ಶ್ರೀಯುತ ಮಾಧವ ಕುಳೂರುರವರು ಇಂದು ತಮ್ಮ ಮನೆಯ ಗೃಹ ಪ್ರವೇಶದ ಪ್ರಯುಕ್ತ ಶಾಲಾ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಿದರು. ಭೂರಿ ಭೋಜನದ ಜೊತೆಗೆ ಪಾಯಸ, ಹೋಳಿಗೆ ಮೊದಲಾದವುಗಳನ್ನು ಖುದ್ದಾಗಿ ಶಾಲೆಗೆ ಬಂದು ಮಕ್ಕಳಿಗೆ ಬಡಿಸುವುದರೊಂದಿಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಇವರಿಗೆ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದ ಪರವಾಗಿ ತುಂಬು ಹೃದಯದ ಅಭಿನಂದನೆ ಹಾಗೂ ಧನ್ಯವಾದಗಳನ್ನು ಅರ್ಪಿಸಲಾಯಿತು.
Sunday, 11 December 2022
ಶತಮಾನೋತ್ಸವ ಸ್ವಾಗತ ಸಮಿತಿ ರೂಪೀಕರಣ ಸಭೆ
ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಶತಮಾನೋತ್ಸವದ ಅಂಚಿನಲ್ಲಿದ್ದು, ಇದರಂಗವಾಗಿ ಶತಮಾನೋತ್ಸವ ಸ್ವಾಗತ ಸಮಿತಿ ರೂಪೀಕರಣ ಸಭೆಯು ಇಂದು ನಡೆಯಿತು.
ಕಾರ್ಯಕ್ರಮವನ್ನು ವಾರ್ಡ್ ಸದಸ್ಯರಾದ ಜನಾರ್ದನ ಪೂಜಾರಿ ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ಸತ್ಯನಾರಾಯಣ ಶರ್ಮ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಎಲಿಯಾಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಂಚಿಲ, ಕಂಬಳ ಸಮಿತಿಯ ಮಾಜಿ ಅಧ್ಯಕ್ಷರಾದ ಪಿ. ಆರ್. ಶೆಟ್ಟಿ ಪೊಯ್ಯೇಲ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ ಉಪಸ್ಥಿತರಿದ್ದರು.
ಬಳಿಕ ಶತಮಾನೋತ್ಸವದ ಸ್ವಾಗತ ಸಮಿತಿ ರೂಪೀಕರಣ ನಡೆಯಿತು. ಪ್ರಧಾನ ಸಮಿತಿಯೊಂದಿಗೆ ವಿವಿಧ ಉಪ ಸಮಿತಿಗಳನ್ನು ರಚಿಸಲಾಯಿತು.
ಶಾಲಾ ಶಿಕ್ಷಕಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕಿ ನಯನ ಎಂ ವಂದಿಸಿದರು. ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು.
Friday, 2 December 2022
ಹಳೆ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿ ಸಭೆ
ಶತಮಾನೋತ್ಸವ ಆಚರಣೆಯ ಭಾಗವಾಗಿ ಸ್ವಾಗತ ಸಮಿತಿ ರೂಪೀಕರಣದ ರಚನೆಯ ಬಗ್ಗೆ ಚರ್ಚಿಸಲು ಹಳೆ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿಯ ಸಭೆಯನ್ನು ಇಂದು ನಡೆಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಂಚಿಲ ವಹಿಸಿದ್ದರು. ಸ್ವಾಗತ ಸಮಿತಿ ರೂಪೀಕರಣದ ರಚನೆಯ ಬಗ್ಗೆ ಚರ್ಚೆ ನಡೆಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ರವರು ಈ ಬಗ್ಗೆ ಮಾಹಿತಿ ನೀಡಿದರು.
ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಚಾರ್ಲ ಸ್ವಾಗತಿಸಿ, ಕೋಶಾಧಿಕಾರಿ ಸುಧಾಕರ ಶೆಟ್ಟಿ ಎಲಿಯಾಣ ವಂದಿಸಿದರು.
ಅಂತರ ರಾಷ್ಟ್ರೀಯ ವಿಶೇಷ ಚೇತನ ಮಕ್ಕಳ ದಿನಾಚರಣೆ; ವಾರಾಚರಣೆಯ ಅಂಗವಾಗಿ ಮ್ಯಾರಥಾನ್ ಓಟ
ಭಿನ್ನ ಸಾಮರ್ಥ್ಯ, ವಿಶೇಷ ಚೇತನ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವುದು ಅತೀ ಅಗತ್ಯವಾಗಿದೆ. ಇದರಂಗವಾಗಿ ಅಂತರ ರಾಷ್ಟ್ರೀಯ ವಿಶೇಷ ಚೇತನ ಮಕ್ಕಳ ದಿನಾಚರಣೆಯನ್ನು ಒಂದು ವಾರದ ಆಚರಣೆಯಾಗಿ ಅಚರಿಸಲಾಗುತ್ತಿದೆ.
ಆ ಪ್ರಯುಕ್ತ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮ್ಯಾರಥಾನ್ ಓಟ ನಡೆಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ರವರು ಮಕ್ಕಳಿಗೆ ದಿನ ವಿಶೇಷವನ್ನು ತಿಳಿಸಿದರು. ಬಳಿಕ ಮಕ್ಕಳು ಹಾಗೂ ಶಾಲಾ ಅಧ್ಯಾಪಕ ವೃಂದ ಮ್ಯಾರಥಾನ್ ಓಟ ನಡೆಸಿದರು.