FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Thursday 23 April 2020

ಕೊರೋನದ ಕಷ್ಟಕಾಲದಲ್ಲಿ ಶಾಲಾ ರಕ್ಷಕರಿಗೆ ಆಸರೆಯಾದ ಶಾಲಾ ರಕ್ಷಕ-ಶಿಕ್ಷಕ ಸಂಘ


             ಕೊರೋನ ಎಂಬ ಮಹಾಮಾರಿಯಿಂದ ಇಡೀ ಪ್ರಪಂಚವೇ ತತ್ತರಿಸಿ ಹೋಗಿದೆ. ಈ ಪಿಡುಗನ್ನು ಹೋಗಲಾಡಿಸಲು ಸಾಮಾಜಿಕ ಅಂತರವೇ ಮೊದಲ ಮದ್ದು ಎಂಬಂತೆ ದೇಶವನ್ನು ಲಾಕ್ ಡೌನ್ ನಲ್ಲಿಡಲಾಗಿದೆ. ನಮ್ಮ ಭವಿಷ್ಯದ ಉಳಿವಿಗೆ ಇದು ಅತ್ಯಗತ್ಯ. ಹಿಂದೆಂದೂ ಕಾಣದ, ಕೇಳದ ಈ ದುರವಸ್ಥೆಯನ್ನು ಕಂಡು ಜನ ಮಮ್ಮಲ ಮರುಗುತ್ತಿದ್ದಾರೆ. ಆದರೂ ಅನಿವಾರ್ಯ. ಇಂತಹ ಸಂದರ್ಭದಲ್ಲಿ ಸಾಮಾನ್ಯ ಜನರ ಜೀವನ ತಲೆಕೆಳಗಾದಂತಿದೆ. ದೈನಂದಿನ ದುಡಿಮೆಯಲ್ಲೇ ಬದುಕು ಸವೆಸುವ ಜನರ ಕಷ್ಟ ಹೇಳತೀರದು. ಆದರೂ ಸರಕಾರ, ಕೆಲವು ಸಂಘ ಸಂಸ್ಥೆಗಳ, ದಾನಿಗಳ ನೆರವಿನಿಂದ ಹೇಗೋ ದಿನ ಮುಂದೂಡುತ್ತಿದ್ದಾರೆ.
‌            ಸರಕಾರಿ ಶಾಲೆಗಳಲ್ಲಿ ಬರುವ ಹೆಚ್ಚಿನ ಎಲ್ಲಾ ರಕ್ಷಕರು ತೀರ ಬಡವರಾಗಿದ್ದು ಈ ಸಮಯದಲ್ಲಿ ಅವರ ಜೀವನ ದುಸ್ಥರವಾಗಿದೆ. ಹಲವರು ಸಹಾಯದ ನಿರೀಕ್ಷೆಯಲ್ಲಿರುವವರಾಗಿರುವರು. ಇದನ್ನು ಮನಗಂಡ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಶಾಲಾ ರಕ್ಷಕರನ್ನೊಳಗೊಂಡ ಶಾಲಾ ರಕ್ಷಕ-ಶಿಕ್ಷಕ ಸಂಘ ಶಾಲೆಯ ಎಲ್ಲಾ ಮಕ್ಕಳ ಮನೆಗಳಿಗೆ ತೆರಳಿ, ಯೋಗಕ್ಷೇಮವನ್ನು ವಿಚಾರಿಸಿ ದಿನ ಬಳಕೆಗೆ ಬೇಕಾಗುವ ವಸ್ತುಗಳನ್ನೊಳಗೊಂಡ ಕಿಟ್ ವಿತರಣೆ ಮಾಡುವ ಮೂಲಕ ಮಾದರಿಯಾದರು. ಶಾಲಾ ಅಧ್ಯಾಪಕ ವೃಂದ ಮಕ್ಕಳ ಮನೆ ಕಲಿಕೆಯ ಕುರಿತು ವಿಚಾರಿಸುತ್ತಾ, ಸಾಧ್ಯವಾಗುವವರಿಗೆ ಸೋಶಿಯಲ್ ಮೀಡಿಯಾದ ಮೂಲಕ ಚಟುವಟಿಕೆಗಳನ್ನು ನೀಡಿ ಮಕ್ಕಳ ಕಲಿಕೆಯು ನಿರಂತರವಾಗುವಂತೆ ಪ್ರಯತ್ನಿಸುತ್ತಿದ್ದಾರೆ. ಮನೆ ಮನೆ ಭೇಟಿಯು ಹೆತ್ತವರಿಗೆ ಸಂತಸವನ್ನು ಕೊಟ್ಟದ್ದು ಮಾತ್ರವಲ್ಲದೆ, ಮುಖತಃ ಪರಸ್ಪರ ವಿಚಾರ ವಿನಿಮಯ ಮಾಡಲು ಸಾಧ್ಯವಾಗಿದ್ದು ರಕ್ಷಕರಲ್ಲಿ ಅಭಿಮಾನ ಮೂಡುವಂತೆ ಮಾಡಿದೆ. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ, ಉಪಾಧ್ಯಕ್ಷ ಕಮಲಾಕ್ಷ ಕಲ್ಕಾರ್, ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ರಾಜಲಕ್ಷ್ಮಿ ದೇರಂಬಳ ಗುತ್ತು, ಪ್ರೀ ಪ್ರೈಮರಿ ವಿಭಾಗದ ಪಿ. ಟಿ. ಎ ಅಧ್ಯಕ್ಷ ಸತೀಶ್ ಎಲಿಯಾಣ, ಸುಧಾಕರ ಶೆಟ್ಟಿ ಎಲಿಯಾಣ ಮೊದಲಾದವರ ನೇತೃತ್ವದಲ್ಲಿ, ಶಾಲಾ ಶಿಕ್ಷಕ ವೃಂದದ ಸಹಕಾರದೊಂದಿಗೆ ನಡೆಸಿದ ಈ ಕಿಟ್ ವಿತರಣೆ ಎಲ್ಲರ ಪ್ರಶಂಸೆಗೆ ಕಾರಣವಾಯಿತು.






4 comments:

  1. Good job ..

    Team Kuloor school

    ReplyDelete
  2. ಇದು ಎಲ್ಲಾ ಶಾಲೆಗಳಿಗೂ ಮಾದರಿ...ಅಭಿನಂದನೆಗಳು

    ReplyDelete