FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Friday 12 August 2022

ಮೇಳೈಸಿದ ಆಟಿದ ಕೂಟ ಕಾರ್ಯಕ್ರಮ

          ತುಳುನಾಡಿನಲ್ಲಿ ಆಟಿ ತಿಂಗಳಿಗೆ ಒಂದು ವಿಶೇಷ ಸ್ಥಾನವಿದೆ. ರೋಗ ರುಜಿನಗಳನ್ನು ದೂರ ಮಾಡುವ ಆಟಿ ಕಳಂಜ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಟಿ ಅಮಾವಾಸ್ಯೆ ಕಷಾಯ, ನವ ವಧುವಿಗೆ ತವರು ಮನೆಗೆ ಕಳುಹಿಸುವ 'ಆಟಿ ತಮ್ಮನ' ಹೀಗೆ ಹತ್ತು ಹಲವು ಸಂಪ್ರದಾಯಗಳು ಪಾರಂಪರ್ಯವಾಗಿ ತುಳುನಾಡಿನಲ್ಲಿ ಈಗಲೂ ರೂಢಿಯಲ್ಲಿದೆ.

      ಹಿಂದಿನ ಕಾಲದಲ್ಲಿ ಆಟಿ ತಿಂಗಳು ಎಂದರೆ ಜನ ಸಾಮಾನ್ಯರಿಗೆ ಕಷ್ಟದ ದಿನಗಳನ್ನು ಎದುರಿಸುವ ಸಮಯ. ಜೋರು ಮಳೆ, ಕೆಲಸವಿಲ್ಲದ ದಿನಗಳನ್ನು ಕಳೆಯುವ ಈ ಆಟಿ ತಿಂಗಳನ್ನು ಕಳೆಯುವುದೇ ಹಿಂದಿನ ಕಾಲದಲ್ಲಿ ತ್ರಾಸದಾಯಕವಾಗಿತ್ತು. ಆ ಸಮಯದಲ್ಲಿ ಜನ ಸಾಮಾನ್ಯರು ಆಹಾರವನ್ನು ಸ್ಥಳೀಯವಾಗಿ ಪ್ರಕೃತಿಯಲ್ಲಿ ಸಿಗುವ ಆಹಾರ ಪದಾರ್ಥಗಳನ್ನು ಉಪಯೋಗಿಸಿ ಮಾಡುತ್ತಿದ್ದರು. ಆರೋಗ್ಯವನ್ನು ಕಾಪಾಡುವಲ್ಲಿ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಇಂತಹ ಆಹಾರ ಪದ್ಧತಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಕಾಲ ಕ್ರಮೇಣ ಜನರ ಜೀವನ ಮಟ್ಟವು ಸುಧಾರಿಸುತ್ತಾ ಹೋಗಿರುವುದಲ್ಲದೆ ಆಧುನಿಕ ಆಹಾರ ಪದ್ಧತಿಗೆ ಜನರು ಮಾರು ಹೋದರು. ಹಾಗಾಗಿ ಹಿಂದಿನ ಕಾಲದಲ್ಲಿ ತಯಾರಿಸುತ್ತಿದ್ದ ಈ ಆಹಾರ ಪದಾರ್ಥಗಳ ಪರಿಚಯ ಈಗಿನ ತಲೆಮಾರಿಗೆ ಇಲ್ಲದಾಯಿತು.

           ಇಂದಿನ ತಲೆಮಾರಿಗೆ ಇದರ ಪರಿಚಯ ಮಾಡಿಸಲು, ಮುಖ್ಯವಾಗಿ ಶಾಲಾ ಮಕ್ಕಳಿಗೆ ಇದರ ಅರಿವು ಮೂಡಿಸಲು ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿದ ಕೂಟ ಎಂಬ ವಿಶೇಷ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ವಾರ್ಡ್ ಸದಸ್ಯರಾದ ಶ್ರೀ ಜನಾರ್ದನ ಪೂಜಾರಿ ಕುಳೂರು ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮ ಪಿ ರವರು ಆಟಿ ತಿಂಗಳ ವಿಶೇಷತೆಗಳನ್ನು ಮಕ್ಕಳಿಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಎಲಿಯಾಣ, ಉಪಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಪೊಯ್ಯೆಲ್, ಮಾತೃ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸುನೀತಾ ಕುಳೂರು, ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಜಯರಾಜ್ ಶೆಟ್ಟಿ ಚಾರ್ಲ ಉಪಸ್ಥಿತರಿದ್ದರು. ಮಕ್ಕಳ ಹೆತ್ತವರಾದ ಪ್ರತಿಭಾ ಕುಳಬೈಲು, ಲೀಲಾವತಿ ಕುಳೂರು ಕನ್ಯಾನ, ಸುನೀತಾ ಕುಳೂರು ತಾವು ತಯಾರಿಸಿದ ವಿಶೇಷ ತಿಂಡಿಯ ಮಾಡುವ ವಿಧಾನವನ್ನು ತಿಳಿಸಿ ಕೊಟ್ಟರು. ಸುಪ್ರೀತಾ ಕುಳೂರು ಹೊಸಮನೆಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

           ಆಟಿ ತಿಂಗಳಲ್ಲಿ ತಯಾರಿಸುವ ವಿವಿಧ ಬಗೆಯ ತಿಂಡಿ ತಿನಿಸುಗಳ ಪ್ರದರ್ಶನ ನಡೆಯಿತು. ಈ ತಿಂಡಿ ತಿನಿಸುಗಳನ್ನು ಮಕ್ಕಳ ಹೆತ್ತವರು ಹಾಗೂ ಶಾಲಾ ಶಿಕ್ಷಕ ವೃಂದ ತಂದು ಮಕ್ಕಳಿಗೆ ಉಣ ಬಡಿಸಿದರು. ವಿವಿಧ ಬಗೆಯ ಪತ್ರೊಡೆ, ಹಲಸಿನ ಗಟ್ಟಿ, ಅರಶಿನ ಎಲೆ ಅಡೆ, ಮೆಂತೆ ಮನ್ನಿ, ಚೇಟ್ಲಾ, ಉಪ್ಪಡ್ ಪಚ್ಚಿಲ್, ಉರುಳಿ ಚಟ್ನಿ, ನೆಲನೆಲ್ಲಿ ಚಟ್ನಿ, ಪುನರ್ಪುಳಿ ಚಟ್ನಿ, ಮಾವಿನಕಾಯಿ ಚಟ್ನಿ, ತಗತೆ ಪಲ್ಯ, ಹಲಸಿನ ಗಾರಿಗೆ, ಪೂಂಬೆ ಉರುಳಿ ಪಲ್ಯ, ಬಾಳೆದಿಂಡು ಹೆಸರು ಗಸಿ, ಚೇರ ಚಟ್ನಿ, ಪೂಂಬೆ ಹೆಸರು ಪಲ್ಯ, ಹಲಸಿನ ಹಣ್ಣಿನ ಪಾಯಸ ಮೊದಲಾದ ಆಹಾರ ಪದಾರ್ಥಗಳ ಪ್ರದರ್ಶನ ಹಾಗೂ ಸಹ ಭೋಜನ ನಡೆಯಿತು. ಆಟಿ ತಿಂಗಳ ವಿಶೇಷತೆಯೊಂದಿಗೆ ಶಾಲೆಯಲ್ಲಿ ಸಮಾನತೆಯ ಮಂತ್ರವನ್ನು ಈ ಮೂಲಕ ಸಾರಲಾಯಿತು. ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಮಕ್ಕಳ ಹೆತ್ತವರಿಗೆ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಲಾಯಿತು. 















No comments:

Post a Comment