FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Sunday, 12 May 2024

ಕುಳೂರು ಶಾಲೆಯಲ್ಲಿ ಶತಾಬ್ದಿ ಸಂಭ್ರಮ ; ಸದಾಶಿವ ರಂಗಮಂದಿರ ಉದ್ಘಾಟನೆ :

           'ತಾಯಿಗಿಂತ ಮಿಗಿಲಾದ ದೇವರಿಲ್ಲ, ಅಂತಹ ಮಹಾತಾಯಿಯ ಹೆಸರು ಚಿರಸ್ಥಾಯಿಯಾಗಿ ಉಳಿಯಲು ಅವರ ಹೆಸರಲ್ಲಿ ನಾನು ಮತ್ತು ನನ್ನ ಸಹೋದರ ಕೊಟ್ಟ ರಂಗಮಂದಿರ ಹಾಗೂ ಸಭಾಂಗಣ‌ ನೋಡಿ‌ ಸಾರ್ಥಕವಾಯಿತು. ಶಾಲೆಯು ಹೀಗೆ ಉತ್ತರೋತ್ತರ ಅಭಿವೃದ್ಧಿಯನ್ನು ಕಾಣಲಿ' ಎಂದು ಕೊಡುಗೈದಾನಿ ಕುಳೂರು ಕನ್ಯಾನ ಸದಾಶಿವ ಕೆ. ಶೆಟ್ಟಿ ಹೇಳಿದರು.

         ಅವರು ನಿನ್ನೆ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶತಾಬ್ದಿ ಸಂಭ್ರಮ ಕಾರ್ಯಕ್ರಮದಲ್ಲಿ ತಾವು ಕಲಿತ ಕುಳೂರು ಶಾಲೆಯ ಶತಮಾನೋತ್ಸವದ ಪ್ರಯುಕ್ತ ಕೊಡುಗೆ ನೀಡಿದ ಸದಾಶಿವ ರಂಗಮಂದಿರವನ್ನು ಉದ್ಘಾಟಿಸಿ ಮಾತನಾಡಿದರು.

       ಶತಮಾನೋತ್ಸವದ ಪ್ರಯುಕ್ತ ಕೊಡುಗೆ ನೀಡಿದ ರೂಫ್ ಶೀಟ್ ಹಾಗೂ ಇಂಟರ್ಲಾಕ್ ವ್ಯವಸ್ಥೆಯನ್ನೊಳಗೊಂಡ ಸಭಾಂಗಣವನ್ನು ಕುಳೂರು ಕನ್ಯಾನ ರಘುರಾಮ ಕೆ. ಶೆಟ್ಟಿಯವರು ಉದ್ಘಾಟಿಸಿದರು.

        ಬೆಳಿಗ್ಗೆ ಕುಳೂರು ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್‌ ಹಾಜಿ‌ ಕಂಚಿಲರವರು ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಚಾಲನೆ‌ ನೀಡಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಕುಳೂರು ಬೀಡಿನ ದಾಸಣ್ಣ ಆಳ್ವರವರು ದೀಪ‌ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಸದಾಶಿವ ಶೆಟ್ಟಿ ಕುಳೂರು ಕನ್ಯಾನರವರು ವಹಿಸಿದ್ದರು.

‌‌‌‌‌‌‌  ಶಾಲಾ ಶತಮಾನೋತ್ಸವದ ಪ್ರಯುಕ್ತ ರಚನೆಯಾದ 'ಅರಳು' ಸ್ಮರಣ ಸಂಚಿಕೆಯನ್ನು ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ‌ ದಿನೇಶ್ ವಿ‌ ಬಿಡುಗಡೆಗೊಳಿಸಿದರು. 

       ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೇರಳ ತುಳು ಅಕಾಡಮಿಯ ಅಧ್ಯಕ್ಷರಾದ ಕೆ.ಆರ್. ಜಯಾನಂದ, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಪ್ರಭಾಕರ್ ರೈ ನಡುಹಿತ್ಲು, ಕಾಪು ಭಾರತ್ ಕೇನ್ನಿಂಗ್ ಕಂಪನಿಯ ವ್ಯವಸ್ಥಾಪಕ‌ ನಿರ್ದೇಶಕರಾದ ಶ್ರೀಧರ ಸೇನವ, ನಿವೃತ್ತ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಕೃಷ್ಣಮೂರ್ತಿ ಎಂ.ಎಸ್‌, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ್ ರಾವ್ ಪಿ.ಬಿ, ಗುಬ್ಯ ಶ್ರೀಧರ ಶೆಟ್ಟಿ, ಮೋಹನ್ ಶೆಟ್ಟಿ ಮಜ್ಜಾರ್, ಐಲ‌ ದೇವದಾಸ್ಥಾನದ ಮೊಕ್ತೇಸರರಾದ ನಾರಾಯಣ ಹೆಗ್ಡೆ ಮೊದಲಾದವರು ಆಗಮಿಸಿದ್ದರು.

       ಕಾರ್ಯಕ್ರಮಕ್ಕೆ ಕಾಸರಗೋಡು ಜಿಲ್ಲಾ‌ ಪಂಚಾಯತು ಸದಸ್ಯರಾದ ಕಮಲಾಕ್ಷಿ ಕೆ, ಮಂಜೇಶ್ವರ ಬ್ಲಾಕ್ ಪಂಚಾಯತು ಸದಸ್ಯೆ ಅಶ್ವಿನಿ ಎಂ.ಎಲ್, ವಾರ್ಡ್ ಸದಸ್ಯರಾದ ಜನಾರ್ಧನ ಪೂಜಾರಿಯವರು ಆಗಮಿಸಿದ್ದರು‌.

     ‌‌‌ಇದೇ ಸಂಧರ್ಭದಲ್ಲಿ ಶಾಲೆಯ ಮಹಾಪೋಷಕರಾದ ಕುಳೂರು ಕನ್ಯಾನ ಸದಾಶಿವ ಕೆ‌.‌ ಶೆಟ್ಟಿ, ಕುಳೂರು ಕನ್ಯಾನ ರಘುರಾಮ ಕೆ. ಶೆಟ್ಟಿ, ಮೋಹನ್ ಶೆಟ್ಟಿ ಮಜ್ಜಾರ್ ರವರನ್ನು ಶಾಲು ಹೊದಿಸಿ, ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಜಿಲ್ಲಾ‌ ಶಿಕ್ಷಣಾಧಿಕಾರಿಯಾಗಿ ಭಡ್ತಿ ಹೊಂದಿದ ದಿನೇಶ್ ವಿ, ಕುಳೂರು ಶಾಲೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಕೃಷ್ಣಮೂರ್ತಿ ಎಂ.ಎಸ್. ರವರನ್ನು ಗೌರವಿಸಲಾಯಿತು. ಜೊತೆಗೆ ಶಾಲೆಯಲ್ಲಿ ಸೇವೆ ಸಲ್ಲಿಸಿದ ಮುಖ್ಯ ಶಿಕ್ಷಕರುಗಳಾದ ಮೊಹಮ್ಮದ್‌ ಪಿ, ಪೂವಣಿ ಪೂಜಾರಿ, ಸತ್ಯನಾರಾಯಣ ಶರ್ಮ ಪಿ ಹಾಗೂ ವಿನೋದ್ ಕುಮಾರ್ ಬಿ. ರವರನ್ನು ಗೌರವಿಸಲಾಯಿತು.

      ನಾಲ್ಕನೇ ತರಗತಿಯ ರಕ್ಷಕರು ಶಾಲೆಗೆ 25 ಕುರ್ಚಿಗಳನ್ನು ಕೊಡುಗೆ ನೀಡಿ ಗಮನ ಸೆಳೆದರು.

      ಶಾಲಾ ಮುಖ್ಯ ಶಿಕ್ಷಕಿ ಮಾಲತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯರಾಜ್ ಸಿ ಶೆಟ್ಟಿ ಚಾರ್ಲ ಸ್ವಾಗತಿಸಿ, ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ವಂದಿಸಿದರು. ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ ಅಂಗಡಿದಾರ್ ಕಾರ್ಯಕ್ರಮ ನಿರೂಪಿಸಿದರು.

        ಬಳಿಕ ಶಾಲಾ ಮಕ್ಕಳು, ಅಂಗನವಾಡಿ ಪುಟಾಣಿಗಳು, ರಕ್ಷಕ-ಶಿಕ್ಷಕ ಸಂಘದ ಸದಸ್ಯರು, ಹಳೆ ವಿದ್ಯಾರ್ಥಿಗಳು ಹಾಗೂ ಊರವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

         ಫ್ರೆಂಡ್ಸ್ ಆರ್ಟ್ಸ್ ಏಂಡ್ ಸ್ಪೋರ್ಟ್ಸ್ ಕ್ಲಬ್ ಕುಳೂರು ಇವರ ಪ್ರಾಯೋಜಕತ್ವದಲ್ಲಿ ರಿದಂ ಫೋಕ್ ಬ್ಯಾಂಡ್ ಮಡಿಕೈ ಇವರಿಂದ ನಾಡನ್ ಪಾಟ್, ಕುಟುಂಬಶ್ರೀ ಬಳಗ ಕುಳೂರು ಇವರ ಪ್ರಾಯೋಜಕತ್ವದಲ್ಲಿ ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಮಂಡಳಿ ಕುಕ್ಕಾಜೆ ಇವರಿಂದ 'ಶಶಿಪ್ರಭ ಪರಿಣಯ' ಮಹಿಳಾ ಯಕ್ಷಗಾನ ಬಯಲಾಟ ನಡೆಯಿತು.

























































No comments:

Post a Comment