FLASH NEWS
Tuesday, 29 June 2021
ಫಲಾನುಭವಿ ಮಕ್ಕಳಿಗೆ ಸ್ಮಾರ್ಟ್ ಫೋನ್ ವಿತರಣೆ
ಕೊರೋನ ಕಾಲಘಟ್ಟವು ಮಕ್ಕಳ ವಿದ್ಯಾಭ್ಯಾಸದಲ್ಲಿ ಹಲವು ಬದಲಾವಣೆಗಳನ್ನು ತಂದೊಡ್ಡಿದ್ದು ಆನ್ಲೈನ್ ಶಿಕ್ಷಣವು ಅನಿವಾರ್ಯವೆನಿಸಿದೆ. ಕಳೆದ ವರ್ಷ ಹಲವು ಮಕ್ಕಳಿಗೆ ಈ ಆನ್ಲೈನ್ ಶಿಕ್ಷಣವು ಲಭಿಸದೇ ಇರುವುದನ್ನು ಕಂಡು, ಎಲ್ಲಾ ಮಕ್ಕಳಿಗೂ ಆನ್ಲೈನ್ ಶಿಕ್ಷಣ ಲಭಿಸುವಂತೆ ಮಾಡಲು ವ್ಯವಸ್ಥೆ ಮಾಡಲು ಶಿಕ್ಷಣ ಇಲಾಖೆ ಸೂಚಿಸಿದ ಬೆನ್ನಲ್ಲೇ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು, ವಿದ್ಯಾಭಿಮಾನಿಗಳ ಸಹಯೋಗದಲ್ಲಿ ಶಾಲಾಭಿವೃದ್ಧಿ ಸಮಿತಿ ಸಭೆ ನಡೆಸಿ ಶಾಲೆಯಲ್ಲಿ ಆನ್ಲೈನ್ ಕ್ಲಾಸ್ ವೀಕ್ಷಿಸಲು ಸ್ಮಾರ್ಟ್ ಫೋನ್ ಇಲ್ಲದ 9 ಮಕ್ಕಳಿಗೆ ಕೊಡುಗೆ ರೂಪದಲ್ಲಿ ಸ್ಮಾರ್ಟ್ ಫೋನ್ ನೀಡುವ ತೀರ್ಮಾನ ಕೈಗೊಳ್ಳಲಾಗಿತ್ತು. ಅದರಂತೆ ಸ್ಥಳೀಯ ಸಂಘ ಸಂಸ್ಥೆಗಳ ಮತ್ತು ದಾನಿಗಳ ನೆರವಿನೊಂದಿಗೆ ಲಭಿಸಿದ ಸ್ಮಾರ್ಟ್ ಫೋನುಗಳ ವಿತರಣೆಯು ಕುಳೂರು ಶಾಲೆಯಲ್ಲಿ ನಡೆಯಿತು.
ವಾರ್ಡ್ ಸದಸ್ಯರಾದ ಜನಾರ್ಧನ ಪೂಜಾರಿಯವರು ಉದ್ಘಾಟಿಸಿ, ಫಲಾನುಭವಿಗಳಿಗೆ ಸ್ಮಾರ್ಟ್ ಫೋನ್ ವಿತರಣೆ ಮಾಡಿ 'ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಆನ್ಲೈನ್ ಕ್ಲಾಸ್ ಅನಿವಾರ್ಯ, ಈ ಸಮಯದಲ್ಲಿ ಮಕ್ಕಳು ಸ್ಮಾರ್ಟ್ ಫೋನ್ ಮೂಲಕ ಕಲಿಕೆಯಲ್ಲಿ ತೊಡಗಿದರೂ ಹೆತ್ತವರು ಅದರ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾ, ಸ್ಮಾರ್ಟ್ ಫೋನುಗಳ ಸದ್ಬಳಕೆಯಾಗುವುದರೊಂದಿಗೆ ಮಕ್ಕಳ ಶಿಕ್ಷಣವು ಪರಿಪೂರ್ಣವಾಗಿ ನಡೆಯಲಿ' ಎಂದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಮಾರ್ಟ್ ಫೋನ್ ಕೊಡುಗೆಯಾಗಿ ನೀಡಿದ ಎಲ್ಲರನ್ನೂ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಂಚಿಲ, ಕೋಶಾಧಿಕಾರಿಯಾದ ಚಿಕ್ಕಪ್ಪ ಶೆಟ್ಟಿ ಎಲಿಯಾಣ, ಪ್ರೀ ಪ್ರೈಮರಿ ವಿಭಾಗದ ಪಿ. ಟಿ. ಎ ಅಧ್ಯಕ್ಷ ಸತೀಶ್ ಎಲಿಯಾಣ ಉಪಸ್ಥಿತರಿದ್ದರು. ಸ್ಮಾರ್ಟ್ ಫೋನ್ ಕೊಡುಗೆ ನೀಡಿದವರಲ್ಲಿ ವಿವಿಧ ಸಂಘ ಸಂಸ್ಥೆಗಳಾದ ಸ್ನೇಹ ಆರ್ಟ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್, ಸ್ಪಂದನ ಆರ್ಟ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್, ಫ್ರೆಂಡ್ಸ್ ಕುಳೂರು, ಹಳೆ ವಿದ್ಯಾರ್ಥಿ ಸಂಘ, ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರು, ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಪಿ ವಂದಿಸಿದರು.
Wednesday, 23 June 2021
ಆಹಾರ ಕಿಟ್ ವಿತರಣೆ
ಸರಕಾರದ ವತಿಯಿಂದ ಕಳೆದ ಶೈಕ್ಷಣಿಕ ವರ್ಷದ ಮಕ್ಕಳಿಗೆ ಸೆಪ್ಟೆಂಬರ್ 2020 ರಿಂದ ಮಾರ್ಚ್ 2021 ರ ವರೆಗಿನ ಆಹಾರದ ಕಿಟ್ ವಿತರಣೆಯು ತಾ. 23-06-2021 ರಂದು ನಡೆಸಲಾಯಿತು.
Saturday, 19 June 2021
ಕಲಿಕಾ ಕೇಂದ್ರಗಳ ವ್ಯವಸ್ಥೆ
ವಿವಿಧ ಕಾರಣಗಳಿಂದ ಆನ್ಲೈನ್ ಕ್ಲಾಸ್ ನೋಡಲು ಸಮಸ್ಯೆ ಇರುವ ಮಕ್ಕಳಿಗೆ ಕಲಿಕಾ ಕೇಂದ್ರಗಳ ಮೂಲಕ ಆನ್ಲೈನ್ ಕ್ಲಾಸ್ ವೀಕ್ಷಿಸಲು ವ್ಯವಸ್ಥೆ ಮಾಡುವ ಸಲುವಾಗಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿ ಸಭೆಯನ್ನು ಕರೆಯಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ ವಹಿಸಿದ್ದರು. ಕಳೆದ ವರ್ಷದ ಆನ್ಲೈನ್ ಕ್ಲಾಸುಗಳ ನ್ಯೂನತೆಗಳನ್ನು ಪರಿಹರಿಸಲು ಶಾಲಾ ಶಿಕ್ಷಕ ವೃಂದ ಸ್ವ ಇಚ್ಛೆಯಿಂದ ಪ್ರತಿ ತರಗತಿಯ ಮಕ್ಕಳೊಂದಿಗೆ ಕ್ಲಾಸ್ ಅಧ್ಯಾಪಕರು ಪ್ರತಿ ದಿನ ಈಗ ನಡೆಸುತ್ತಿರುವ ಗೂಗಲ್ ಮೀಟ್ ಕ್ಲಾಸನ್ನು ಎಲ್ಲರೂ ಪ್ರಶಂಸಿಸಿ, ಮಕ್ಕಳು ಇದರಿಂದ ಹೆಚ್ಚು ಕಲಿಕಾಭಿವೃದ್ಧಿಯನ್ನು ಕಾಣಲು ಸಾಧ್ಯವಾಗಿದೆಯೆಂದು ಎಲ್ಲರೂ ಅಭಿಪ್ರಾಯ ಪಟ್ಟರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ ರವರು ಮಕ್ಕಳ ಆನ್ಲೈನ್ ಕ್ಲಾಸ್ ವೀಕ್ಷಣೆಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಸಭೆಯಲ್ಲಿ ತೀರ್ಮಾನಿಸಿದಂತೆ ಮೂರು ಕಲಿಕಾ ಕೇಂದ್ರಗಳ ವ್ಯವಸ್ಥೆ ಮಾಡಲಾಯಿತು. ಕುಳೂರು ಕಮ್ಯೂನಿಟಿ ಹಾಲ್, ಚಿನಾಲ ಅಂಗನವಾಡಿ ಹಾಗೂ ಮಡಿಮುಗೇರಿನ ಎಂ. ಜಿ. ಎಲ್. ಸಿ ಶಾಲೆ ಅಥವಾ ಸಂತಡ್ಕ ಅಂಗನವಾಡಿಯನ್ನು ಕಲಿಕಾ ಕೇಂದ್ರಗಳಾಗಿ ಗುರುತಿಸಲಾಯಿತು. ಪ್ರತಿ ಕಲಿಕಾ ಕೇಂದ್ರಗಳಲ್ಲಿ ಬರುವ ಮಕ್ಕಳ ವಿವರಗಳನ್ನು ಶಿಕ್ಷಕಿ ನಯನ ಎಂ ನೀಡಿದರು. ಮಾತೃ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಸುಪ್ರೀತ ಕುಳೂರು ಹೊಸಮನೆ, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಎಲಿಯಾಣ ಹಾಗೂ ಪಿ. ಟಿ. ಎ ಕಾರ್ಯಕಾರಿ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ವಂದಿಸಿದರು.
Sunday, 13 June 2021
ಪ್ರೀ ಪ್ರೈಮರಿ ವಿಭಾಗದ ಆನ್ಲೈನ್ ಕ್ಲಾಸ್ ಉದ್ಘಾಟನೆ
ಪ್ರೀ ಪ್ರೈಮರಿ ವಿಭಾಗದ ಆನ್ಲೈನ್ ಕ್ಲಾಸ್ ಉದ್ಘಾಟನೆ:
ಕುಳೂರು ಶಾಲೆಯ ಒಂದರಿಂದ ನಾಲ್ಕನೇ ತರಗತಿಯ ಮಕ್ಕಳಿಗೆ ಶಿಕ್ಷಣ ಇಲಾಖೆಯ ವತಿಯಿಂದ ಈಗಾಗಲೇ ಆನ್ಲೈನ್ ಕ್ಲಾಸುಗಳ ವ್ಯವಸ್ಥೆಯಾಗಿದ್ದು, ಪ್ರೀ ಪ್ರೈಮರಿ ವಿಭಾಗದ ಮಕ್ಕಳಿಗೆ ಯಾವುದೇ ವ್ಯವಸ್ಥೆ ಇಲ್ಲದಿರುವುದನ್ನು ಕಂಡು ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದದ ನೇತೃತ್ವದಲ್ಲಿ ಪ್ರೀ ಪ್ರೈಮರಿ ವಿಭಾಗದ ಮಕ್ಕಳಿಗೂ ಆನ್ಲೈನ್ ಕ್ಲಾಸುಗಳನ್ನು ನೀಡುವ ತೀರ್ಮಾನ ಕೈಗೊಳ್ಳಲಾಗಿತ್ತು. ಅದರ ಸಲುವಾಗಿ 'ನಮ್ಮ ಕುಳೂರು (Namma Kuloor)' ಎಂಬ ಯೂಟ್ಯೂಬ್ ಚಾನಲಿನಲ್ಲಿ ಪ್ರಸಾರ ಮಾಡಲು ಉದ್ದೇಶಿಸಿದ 'ಲಿಟಲ್ ಬೆಲ್' ಎಂಬ ನೂತನ ಪ್ರೀ ಪ್ರೈಮರಿ ಆನ್ಲೈನ್ ಕ್ಲಾಸುಗಳ ಉದ್ಘಾಟನೆಯನ್ನು ಗೂಗಲ್ ಮೀಟ್ ಮೂಲಕ ನಡೆಸಲಾಯಿತು. ಕಾರ್ಯಕ್ರಮವನ್ನು ಶಾಲಾ ಹಳೆ ವಿದ್ಯಾರ್ಥಿ ಹಾಗೂ ಮುಂಬೈಯ ಪ್ರತಿಷ್ಠಿತ ಹೇರಂಭ ಸಂಸ್ಥೆಯ ಮಾಲಿಕರಾದ, ಉದ್ಯಮಿ ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಉದ್ಘಾಟಿಸಿ, ಶಾಲೆಯ ಬಗ್ಗೆ ಅಭಿಮಾನದ ಮಾತುಗಳನ್ನಾಡಿ, ಎಲ್ಲಾ ರೀತಿಯ ಸಹಕಾರವನ್ನು ನೀಡುವ ಭರವಸೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಾರ್ಡ್ ಸದಸ್ಯರಾದ ಜನಾರ್ಧನ ಪೂಜಾರಿ ಕುಳೂರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಂಚಿಲ, ಶಾಲಾ ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ರಾಜಲಕ್ಷ್ಮಿ ದೇರಂಬಳ ಗುತ್ತು, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಎಲಿಯಾಣ ಉಪಸ್ಥಿತರಿದ್ದು ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮ ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಶಿಕ್ಷಕಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕಿ ನಯನ ಎಂ ವಂದಿಸಿದರು. ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು.
Monday, 7 June 2021
ಶಾಲಾಭಿವೃದ್ಧಿ ಸಮಿತಿ ಸಭೆ
ಕೊರೋನ ಕಾರಣದಿಂದ ಈ ಶೈಕ್ಷಣಿಕ ವರ್ಷದಲ್ಲೂ ಆನ್ಲೈನ್ ಶಿಕ್ಷಣ ಅನಿವಾರ್ಯವಾಗಿದ್ದು, ಕಳೆದ ವರ್ಷದಲ್ಲಿ ನಡೆದ ಆನ್ಲೈನ್ ಕ್ಲಾಸುಗಳನ್ನು ನೋಡಲು ಸರಿಯಾದ ವ್ಯವಸ್ಥೆ ಇಲ್ಲದೇ ಹಲವು ಮಕ್ಕಳು ಆನ್ಲೈನ್ ಶಿಕ್ಷಣ ವಂಚಿತರಾಗಿರುವುದನ್ನು ಕಂಡು, ಅದಕ್ಕೆ ಪರಿಹಾರ ಕಂಡುಕೊಳ್ಳಲು ಶಿಕ್ಷಣ ಇಲಾಖೆಯ ಸೂಚನೆಯಂತೆ ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ವಿದ್ಯಾಭಿಮಾನಿಗಳ ಸಹಯೋಗದಲ್ಲಿ ಸಭೆ ಸೇರಲಾಯಿತು. ಸಭೆಯಲ್ಲಿ ವಾರ್ಡ್ ಸದಸ್ಯರಾದ ಜನಾರ್ಧನ ಪೂಜಾರಿ, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ, ಮಾತೃ ರಕ್ಷಕ-ಶಿಕ್ಷಕ ಅಧ್ಯಕ್ಷೆ ಶ್ರೀಮತಿ ರಾಜಲಕ್ಷ್ಮಿ ದೇರಂಬಳ ಗುತ್ತು, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಅಧ್ಯಕ್ಷ ಸತೀಶ್ ಎಲಿಯಾಣ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮ ಪಿ ರವರು ನಮ್ಮ ಕುಳೂರು ಶಾಲಾ ಮಕ್ಕಳ ಆನ್ಲೈನ್ ಕ್ಲಾಸ್ ವೀಕ್ಷಣೆಯ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದರು. ಆನ್ಲೈನ್ ಕ್ಲಾಸ್ ವೀಕ್ಷಣೆಯು ವ್ಯವಸ್ಥೆ ಇಲ್ಲದ 9 ಮಕ್ಕಳನ್ನು ಗುರುತಿಸಿ ಅವರ ವಿವರವನ್ನು ಶಿಕ್ಷಕಿ ನಯನ ಎಂ ಮುಂದಿಟ್ಟರು. ಸಭೆಯಲ್ಲಿ ಈ 9 ಮಕ್ಕಳಿಗೆ ಸ್ಮಾರ್ಟ್ ಫೋನ್ ನೀಡುವ ತೀರ್ಮಾನವನ್ನು ಕೈಗೊಳ್ಳಲಾಯಿತು. ಜೊತೆಗೆ ಆ ಕ್ಷಣದಲ್ಲೇ 9 ಸ್ಮಾರ್ಟ್ ಫೋನುಗಳ ಪ್ರಾಯೋಜಕತ್ವವನ್ನು ವೈಯಕ್ತಿಕವಾಗಿ ಹಾಗೂ ಸಂಘ ಸಂಸ್ಥೆಗಳು ವಹಿಸಿಕೊಂಡರು. ಪ್ರಾಯೋಜಕತ್ವವನ್ನು ವಹಿಸಿದವರ ವಿವರ ಈ ಕೆಳಗಿನಂತಿವೆ.
1) ಜನಾರ್ಧನ ಪೂಜಾರಿ ಕುಳೂರು (ವಾರ್ಡ್ ಸದಸ್ಯರು) ಮತ್ತು ಚಿಕ್ಕಪ್ಪ ಶೆಟ್ಟಿ ಎಲಿಯಾಣ (ಕೋಶಾಧಿಕಾರಿ,ಹಳೆ ವಿದ್ಯಾರ್ಥಿ ಸಂಘ)
2) ಸತೀಶ್ ಎಲಿಯಾಣ (ಅಧ್ಯಕ್ಷರು,ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘ)
3) ರಾಜೇಶ್ ಸೇನವ ನಾರ್ಣಹಿತ್ಲು, ಕಿಶನ್ ಶೆಟ್ಟಿ ಎಲಿಯಾಣ, ಶಿವಪ್ರಸಾದ್ ಶೆಟ್ಟಿ ಕೊಡಿಮಾರ್ ಕುಳೂರು.
4) ಶಾಲಾ ರಕ್ಷಕ-ಶಿಕ್ಷಕ ಸಂಘ
5) ಶಾಲಾ ಹಳೆ ವಿದ್ಯಾರ್ಥಿ ಸಂಘ
6) ಫ್ರೆಂಡ್ಸ್ ಕುಳೂರು
7) ಸ್ನೇಹ ಆರ್ಟ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್, ಕುಳೂರು ಶಾಂತಿನಗರ
8) ಸ್ಪಂದನ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಎಲಿಯಾಣ
9) ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ
ಪ್ರಾಯೋಜಕತ್ವವನ್ನು ವಹಿಸಿದ ಎಲ್ಲರನ್ನೂ ಶಾಲಾ ಪರವಾಗಿ ಅಭಿನಂದಿಸಲಾಯಿತು. ಶಾಲಾ ಶಿಕ್ಷಕಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ವಂದಿಸಿದರು.
Saturday, 5 June 2021
ಪರಿಸರ ದಿನಾಚರಣೆ
ನಮ್ಮ ಕುಳೂರು ಶಾಲೆಯಲ್ಲಿ ಪರಿಸರ ದಿನಾಚರಣೆಯನ್ನು ಶಾಲಾ ಪರಿಸರ ಶುಚೀಕರಣ ಮತ್ತು ಗಿಡ ನೆಡುವ ಕಾರ್ಯಕ್ರಮದೊಂದಿಗೆ ಆಚರಿಸಲಾಯಿತು. ಗಿಡ ನೆಡುವ ಕಾರ್ಯಕ್ರಮಕ್ಕೆ ವಾರ್ಡ್ ಸದಸ್ಯರಾದ ಜನಾರ್ಧನ ಪೂಜಾರಿ ಚಾಲನೆಯಿತ್ತರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಶಿಕುಮಾರ್ ಕುಳೂರು, ರಫೀಕ್ ಪೊಯ್ಯೆಲ್, ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.
Tuesday, 1 June 2021
ಶಾಲಾ ಪ್ರವೇಶೋತ್ಸವ 2021-22
2021-22 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವವು ಗೂಗಲ್ ಮೀಟ್ ಮೂಲಕ ಸರಳವಾಗಿ ನಡೆಸಲಾಯಿತು.
ಕಾರ್ಯಕ್ರಮವನ್ನು ಮೀಂಜ ಪಂಚಾಯತು ಅಧ್ಯಕ್ಷೆಯಾದ ಶ್ರೀಮತಿ ಸುಂದರಿ ಆರ್ ಶೆಟ್ಟಿ ಉದ್ಘಾಟಿಸಿ, ಮಕ್ಕಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿ ಚಾರ್ಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೀಂಜ ಪಂಚಾಯತಿನ ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ಸರಸ್ವತಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಹಾಜಿ ಕಂಚಿಲ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀ ನಾರಾಯಣ ನೈಾಕ್ ನಡುಹಿತ್ಲು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮ ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ರಾಜಲಕ್ಷ್ಮಿ ದೇರಂಬಳ ಗುತ್ತು, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಎಲಿಯಾಣ ಶುಭ ಹಾರೈಸಿದರು. ಬಳಿಕ ಮಕ್ಕಳೊಂದಿಗೆ ಕುಶಲ ಸಂಭಾಷಣೆ ನಡೆಸಲಾಯಿತು. ಕಳೆದ ಶೈಕ್ಷಣಿಕ ವರ್ಷದ ಶಾಲಾ ಚಟುವಟಿಕೆಗಳ ವೀಡಿಯೋ ಪ್ರದರ್ಶನ ನಡೆಸಲಾಯಿತು. ಶಾಲಾ ಶಿಕ್ಷಕಿ ಶ್ರೀಮತಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕಿ ಕುಮಾರಿ ನಯನ ಎಂ ವಂದಿಸಿದರು. ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು.