FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Thursday 29 June 2017

ಪ್ರಜಾಪ್ರಭುತ್ವದ ಪರಿಕಲ್ಪನೆಯಲ್ಲಿ ಮೂಡಿದ ಶಾಲಾ ನಾಯಕನ ಆಯ್ಕೆಯ ಚುನಾವಣೆ

          ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಚುನಾವಣೆಯ ಮೂಲಕ ಶಾಲಾ ನಾಯಕನನ್ನು ಆಯ್ಕೆ ಮಾಡಲಾಯಿತು.
          ಮಕ್ಕಳಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೂಡಿಸುವ ಉದ್ದೇಶದಿಂದ ಶಾಲಾ ಚುನಾವಣೆಯನ್ನು ನಡೆಸಿ ನೈಜ ಅನುಭವವನ್ನು ಪಡೆಯಲು ಶಾಲಾ ನಾಯಕನ ಆಯ್ಕೆಗೆ ಶಾಲಾ ಚುನಾವಣೆಯ ಕಾರ್ಯ ತಂತ್ರವನ್ನು ಬಳಸಲಾಯಿತು. ಶಾಲಾ ಚುನಾವಣೆಯ ಪ್ರಯುಕ್ತ ಮುನ್ನಾ ದಿನ ಸ್ಪರ್ಧಿಸುವ ಅಭ್ಯರ್ಥಿಗಳು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಾಲಾ ಮುಖ್ಯೋಪಾಧ್ಯಾಯರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಮರುದಿನ ನಡೆದ ಚುನಾವಣೆಯಲ್ಲಿ ಶಾಲಾ ಮಕ್ಕಳು ಸರದಿ ಸಾಲಿನಲ್ಲಿ ಬಂದು ತಮ್ಮ ನೆಚ್ಚಿನ ಅಭ್ಯರ್ಥಿಗೆ ತಮ್ಮ ಮತವನ್ನು ಸಲ್ಲಿಸಿದರು.
          ಬಹಳ ಶಿಸ್ತುಬದ್ಧವಾಗಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಮಕ್ಕಳು ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ಹಾಕುವ ಸಂದರ್ಭದಲ್ಲಿ ತಮ್ಮ ಕೈ ಬೆರಳಿಗೆ ಚುನಾವಣಾ ಗುರುತನ್ನು ಹಾಕಿಸಿಕೊಂಡು ಗೌಪ್ಯ ಮತದಾನದ ಮೂಲಕ ಮತ ಚಲಾಯಿಸಿದರು. ಈ ಎಲ್ಲಾ ಪ್ರಕ್ರಿಯೆಯಲ್ಲಿ ಮಕ್ಕಳೇ ಕಾರ್ಯ ನಿರ್ವಹಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕುಮಾರಿ ನಾಗರತ್ನ, ಸಾನ್ವಿಕ, ದುರ್ಗಾಪ್ರಸಾದ್, ವರ್ಷ ಮೊದಲಾದವರು ಈ ಕಾರ್ಯದಲ್ಲಿ ಸಹಕರಿಸಿದರು.
          ಬಳಿಕ ನಡೆದ ಮತ ಎಣಿಕಾ ಪ್ರಕ್ರಿಯೆಯು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಾಲಾ ಮುಖ್ಯೋಪಾಧ್ಯಾಯರ ಸಮ್ಮುಖದಲ್ಲಿ ನಡೆಯಿತು. ಬಳಿಕ ಫಲಿತಾಂಶವನ್ನು ಪ್ರಕಟಿಸಿದಾಗ ವಿಜೇತ ಅಭ್ಯರ್ಥಿಯ ಬೆಂಬಲಿಗರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ವಿಜಯ ಯಾತ್ರೆಯನ್ನು ಕೈಗೊಳ್ಳುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಶಾಲಾ ನಾಯಕಿಯಾಗಿ ಕುಮಾರಿ ಶ್ರೇಯಾ ಕರ್ಕೇರ ಹಾಗೂ ಉಪನಾಯಕ ಮತ್ತು ಆರೋಗ್ಯ ಮಂತ್ರಿಯಾಗಿ ಶ್ರವಣ್ ಕುಮಾರ್ ಆಯ್ಕೆಯಾದರು. ಸಾಂಸ್ಕೃತಿಕ ಕಲಾ ಮಂತ್ರಿಯಾಗಿ ಕುಮಾರಿ ಭುವನ ಕೆ ಹಾಗೂ ಕ್ರೀಡಾ ಮಂತ್ರಿಯಾಗಿ ಲಕ್ಷ್ಮಣ ಆಯ್ಕೆಯಾದರು. ವಿಜೇತರನ್ನು ಶಾಲಾ ಮುಖ್ಯೋಪಾಧ್ಯಾಯರು ಹೂಗುಚ್ಛ ನೀಡಿ ಅಭಿನಂದಿಸಿದರು. ಬಳಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮಾ ರವರು ಪ್ರಮಾಣ ವಚನ ಬೋಧಿಸಿದರು. ಶಾಲಾ ಅಧ್ಯಾಪಕರಾದ ಜಯಪ್ರಶಾಂತ್ ಪಾಲೆಂಗ್ರಿ, ಶ್ರೀಮತಿ ಸೌಮ್ಯ ಪಿ, ಕುಮಾರಿ ಶ್ವೇತಾ ಹಾಗೂ ಕುಮಾರಿ ರೇಷ್ಮ ರವರು ಸಹಕರಿಸಿದರು.

















No comments:

Post a Comment