FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Monday, 2 June 2025

ಕುಳೂರು ಶಾಲೆಯಲ್ಲಿ ಸಂಭ್ರಮದ ಶಾಲಾ ಪ್ರವೇಶೋತ್ಸವ, ಪ್ರೀ ಪ್ರೈಮರಿ ವಿಭಾಗದ ದತ್ತು ಸ್ವೀಕಾರ ಕಾರ್ಯಕ್ರಮ :

          ಕುಳೂರು ಸರಕಾರಿ ಕಿರಿಯ ಪ್ರಾಥಮಿಕ‌ ಶಾಲೆಯು ಕಳೆದ ಹಲವು ವರ್ಷಗಳಿಂದ ಶಾಲಾ ಹಳೆ ವಿದ್ಯಾರ್ಥಿ ಸಂಘ, ಶಾಲಾ ವ್ಯವಸ್ಥಾಪನಾ ಸಮಿತಿ ಹಾಗೂ ಶಾಲಾಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. 

       ಹೆಮ್ಮೆಯ ಹಳೆ ವಿದ್ಯಾರ್ಥಿಗಳಾದ ಕೊಡುಗೈ ದಾನಿಗಳ ಸಹಕಾರದಿಂದ ವ್ಯವಸ್ಥಿತವಾಗಿ ಮುನ್ನಡೆಯುತ್ತಿರುವ ಶಾಲಾ ನೂತನ ಶೈಕ್ಷಣಿಕ ವರ್ಷದ ಪ್ರವೇಶೋತ್ಸವವು ಪ್ರೀ ಪ್ರೈಮರಿ ವಿಭಾಗದ ದತ್ತು ಸ್ವೀಕಾರದೊಂದಿಗೆ ಸಂಪನ್ನವಾಗಿ ನೆರವೇರಿತು.

     ಶಾಲಾ ಪ್ರವೇಶೋತ್ಸವದ ಪ್ರಯುಕ್ತ ನವಾಗತ ಮಕ್ಕಳನ್ನು ಆಕರ್ಷಕ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿ ಚಾರ್ಲರವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮೀಂಜ ಗ್ರಾಮ ಪಂಚಾಯತಿನ ವಿದ್ಯಾಭ್ಯಾಸ ಹಾಗೂ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷರಾದ ಶ್ರೀಮತಿ ಸರಸ್ವತಿ ಕೆ. ಆಗಮಿಸಿದ್ದರು.

      ಈ ವರ್ಷದ ಪ್ರವೇಶೊತ್ಸವಕ್ಕೆ  ಕರ್ನಾಟಕ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರು, ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಕೆಮಿನೋ ಫ್ರಾರ್ಮ್ ಲಿಮಿಟೆಡ್ ನ ಸ್ಥಾಪಕಾಧ್ಯಕ್ಷರಾಗಿರುವ ಶಾಲಾ ಹಳೆ ವಿದ್ಯಾರ್ಥಿಯೂ ಆದ ಡಾ. ಸದಾಶಿವ ಕೆ‌.‌ ಶೆಟ್ಟಿ ಕುಳೂರು ಕನ್ಯಾನರವರು ಉಪಸ್ಥಿತರಿದ್ದು ಇನ್ನಷ್ಟು ಮೆರುಗನ್ನು ನೀಡಿದರು. ಶಾಲೆಯ ಪ್ರೀ ಪ್ರೈಮರಿ ವಿಭಾಗ (ಎಲ್.ಕೆ.ಜಿ., ಯು.ಕೆ.ಜಿ.) ವನ್ನು 5  ವರ್ಷಗಳ ಕಾಲ ದತ್ತು ಸ್ವೀಕಾರ ಮಾಡುವ ಮೂಲಕ ಮಗದೊಮ್ಮೆ ಶಾಲೆಯ ಅಭಿವೃದ್ಧಿಯ ಹರಿಕಾರರೆನಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಪರವಾಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

      ಇತ್ತೀಚೆಗೆ ಕೇರಳ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರಿಗಿರುವ ರಾಜ್ಯ ಪ್ರಶಸ್ತಿಯನ್ನು ಪಡೆ‍ದ ಕುಳೂರು ಶಾಲಾ ಹಳೆ ವಿದ್ಯಾರ್ಥಿ ಶ್ರೀಮತಿ ವಿಶಾಲಾಕ್ಷಿ ದೈಗೋಳಿಯವರನ್ನು ಹಾಗೂ 2024-25 ನೇ ಸಾಲಿನ ಎಲ್.ಎಸ್.ಎಸ್. ಪರೀಕ್ಷೆಯಲ್ಲಿ ತೇರ್ಗಡೆಹೊಂದಿ ಸ್ಕಾಲರ್ ಶಿಪ್ ಗೆ ಅರ್ಹತೆ ಪಡೆದ ಕುಮಾರಿ ಹನ್ವಿಕಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

       ಕಾರ್ಯಕ್ರಮದಲ್ಲಿ ಮಜಿಬೈಲ್ ಸಹಕಾರಿ ಬ್ಯಾಂಕ್ ನ ಪರವಾಗಿ ನವಾಗತ ಮಕ್ಕಳಿಗೆ ಬ್ಯಾಗ್, ಮುಂಬೈನ ಯುವ ಉದ್ಯಮಿ, ಶಾಲಾ ಹಳೆ ವಿದ್ಯಾರ್ಥಿಯೂ ಆದ ಶ್ರೀ ಮೋಹನ್ ಶೆಟ್ಟಿಯವರು ನೀಡಿದ ಸಮವಸ್ತ್ರ ಹಾಗೂ ಶಾಲಾ ಶಿಕ್ಷಕ ವೃಂದದ ಪರವಾಗಿ ನೀಡಿದ ಕಲಿಕೋಪಕರಣಗಳನ್ನು ಶಾಲಾ‌ ಮಕ್ಕಳಿಗೆ ವಿತರಿಸಲಾಯಿತು.

      ಕಾರ್ಯಕ್ರಮದಲ್ಲಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಹಾಜಿ ಕಂಚಿಲ, ಉಪಾಧ್ಯಕ್ಷರಾದ ಶ್ರೀ ಬಾಲಕೃಷ್ಣ ಶೆಟ್ಟಿ ಪೊಯ್ಯೇಲು, ಮಜಿಬೈಲ್‌ ಸಹಕಾರಿ ಬ್ಯಾಂಕ್ ನ ಉಪಾಧ್ಯಕ್ಷರು, ಶಾಲಾ ಹಳೆ ವಿದ್ಯಾರ್ಥಿಯೂ ಆದ ಶ್ರೀ ಚಿಕ್ಕಪ್ಪ ಶೆಟ್ಟಿ ಎಲಿಯಾಣ, ಶಾಲಾ ವ್ಯವಸ್ಥಾಪನಾ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಸತೀಶ್ ಎಲಿಯಾಣ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀ ನಾರಾಯಣ ನೈಕ್‌ ನಡುಹಿತ್ಲು, ಶ್ರೀಮತಿ ಮೋಹಿನಿ ಬಿ. ಶೆಟ್ಟಿ ಮಜ್ಜಾರ್, ಶಾಲಾ ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಉಷಾ ಆದರ್ಶ ನಗರ, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಅನುಪಮ ಚಿನಾಲ ಉಪಸ್ಥಿತರಿದ್ದು ಶುಭ ಹಾರೈಸಿದರು.

ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಸೌಮ್ಯ ಪಿ ವಂದಿಸಿದರು. ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು.

     ಎಲ್ಲರಿಗೂ ಸಿಹಿತಿಂಡಿ ಹಾಗೂ ಪಾಯಸದೂಟದ ವ್ಯವಸ್ಥೆ ಮಾಡಲಾಯಿತು. ಶಾಲಾ ಶಿಕ್ಷಕಿಯರು, ಪಿ.ಟಿ.ಎ. ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.




































No comments:

Post a Comment